ಉಯ್ಗರ್ ಮುಸ್ಲಿಮರ ಮಾನವ ಹಕ್ಕುಗಳ ಮತದಾನದಿಂದ ದೂರ ಉಳಿದ ಭಾರತ: ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ತರಾಟೆ

ಹೊಸದಿಲ್ಲಿ: ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿಯ ಕುರಿತು ಚರ್ಚೆ ನಡೆಸುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಕರಡು ನಿರ್ಣಯದ ವೇಳೆ ಮತದಾನದಿಂದ ದೂರ ಉಳಿದಿದ್ದಕ್ಕಾಗಿ ಕೇಂದ್ರ ಸರ್ಕಾರವನ್ನು ಹಿರಿಯ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಬೀಜಿಂಗ್ "ಮರು-ಶಿಕ್ಷಣ ಕ್ಯಾಂಪ್ (re-education camps)" ಎಂದು ದೊಡ್ಡ ಶಿಬಿರದಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಉಯ್ಗರ್ ಜನರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಬಂಧಿಸಿಟ್ಟಿದೆ ಎಂದು ಮಾನವ ಹಕ್ಕುಗಳ ಗುಂಪುಗಳು ಇತ್ತೀಚಿನ ಕೆಲವು ವರ್ಷಗಳಿಂದ ಎಚ್ಚರಿಸುತ್ತಿವೆ.
ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ಮಾನವಹಕ್ಕುಗಳ ಉಲ್ಲಂಘನೆ ನಡೆಯುತ್ತಿರುವ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಪಾಶ್ಚಿಮಾತ್ಯ ದೇಶಗಳು ವಿಶ್ವಸಂಸ್ಥೆಯ ಮಾನವಹಕ್ಕು ಮಂಡಳಿ (UNHRC)ಯಲ್ಲಿ ಮಂಡಿಸಿದ ನಿರ್ಣಯದ ಮೇಲಿನ ಮತದಾನದಿಂದ ಭಾರತ ಗುರುವಾರ ದೂರ ಉಳಿದಿತ್ತು.
ಈ ಸುದ್ದಿಗೆ ಪ್ರತಿಕ್ರಿಯಿಸಿದ ಸರ್ದೇಸಾಯಿ, "ಭಾರತವು ಕ್ಸಿನ್‌ಜಿಯಾಂಗ್‌ನಲ್ಲಿ ಉಯ್ಗರ್ ಮುಸ್ಲಿಮರ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು ಚೀನಾದ ವಿರುದ್ಧ ಯುಎನ್‌ನಲ್ಲಿ ಮತದಾನದಿಂದ ದೂರವಿರುತ್ತದೆ. ಸೂಕ್ಷ್ಮತೆಗಳನ್ನು ಅರ್ಥಮಾಡಿಕೊಳ್ಳಿ, ಆದರೆ ಚೀನಾ ಕಾಶ್ಮೀರದ ವಿಷಯದಲ್ಲಿ (ಮಾತನಾಡಲು) ಹಿಂಜರಿಯುವುದಿಲ್ಲ ಎಂಬುದನ್ನು ಮರೆಯಬೇಡಿ. ದೇಶದಲ್ಲಿ ಹುಲಿಯಾಗಿ, ವಿದೇಶದಲ್ಲಿ ಕುರಿಮರಿಯಾಗಲು ಸಾಧ್ಯವಿಲ್ಲ, ಅಲ್ಲವೇ?" ಎಂದು ಟ್ವೀಟ್ ಮಾಡಿದ್ದಾರೆ.
Afternoon musing: so India abstains from voting in the UN against China on human rights violations against Uyghur Muslims in Xinjiang. Understand the sensitivities, but don’t forget China doesn’t baulk at taking on India on Kashmir. Can’t be tigers at home but lambs abroad,no?
— Rajdeep Sardesai (@sardesairajdeep) October 7, 2022







