ಮಂಗಳೂರು: MEIF ವತಿಯಿಂದ 2 ದಿನಗಳ ಶೈಕ್ಷಣಿಕ ಕಾರ್ಯಾಗಾರ
ಮಂಗಳೂರು, ಅ.7: ಶಿಕ್ಷಣ ನೀಡುವ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿ ಅದರಿಂದ ಶಾಶ್ವತವಾದ ತೃಪ್ತಿಯನ್ನು ಕಲಿಸುವವರು ಇಹ, ಪರದಲ್ಲಿ ಪಡೆಯಲು ಸಾಧ್ಯ ಎಂದು ಬ್ಯಾರೀಸ್ ಶಿಕ್ಷಣ ಸಮೂಹ ಸಂಸ್ಥೆಗಳ ಆಡಳಿತ ಟ್ರಸ್ಟಿ ಸೈಯದ್ ಮೊಹಮ್ಮದ್ ಬ್ಯಾರಿ ತಿಳಿಸಿದ್ದಾರೆ.
ಮುಸ್ಲಿಂ ಎಜುಕೇಶನಲ್ ಇನ್ಸ್ಟಿಟ್ಯೂಷನ್ಸ್ ಫೆಡರೇಷನ್ (MEIF) ವತಿಯಿಂದ ಅ. 7ಮತ್ತು 8 ರಂದು ಬೋಧನಾ ವಿಧಾನ, ನಾಯಕತ್ವ ಕೌಶಲ್ಯ ಮತ್ತು ಮಾನಸಿಕ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ಅಡ್ಯಾರ್ ಬರಕಾ ಇಂಟರ್ ನ್ಯಾಷನಲ್ ಸ್ಕೂಲ್ ಆಡಿಟೋರಿಯಂನಲ್ಲಿಂದು ಆಯೋಜಿಸಲಾದ ಮೊದಲನೇ ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಪವಿತ್ರ ವೃತ್ತಿಯಲ್ಲಿ ಇರುವ ಶಿಕ್ಷಕರು ಮಕ್ಕಳ ಭವಿಷ್ಯವನ್ನು, ಸಮಾಜವನ್ನು ರೂಪಿಸುವ ಮೂಲಕ ಪವಿತ್ರವಾದ ಸೇವೆಯನ್ನು ಮಾಡುವ ಹಿನ್ನೆಲೆಯಲ್ಲಿ ಅವರಿಗೆ ಗೌರವ ಪೂರ್ವಕವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಅತಿಥಿಗಳಾಗಿ ಭಾಗವಹಿಸಿದ್ದ ಮಂಗಳೂರು ಉತ್ತರ ಬ್ಲಾಕ್ ಶಿಕ್ಷಣ ಅಧಿಕಾರಿ ಸದಾನಂದ ಪೂಂಜಾ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡುತ್ತಾ, ಸರಕಾರಿ ಶಾಲೆಗಳ ಶಿಕ್ಷಕರಿಗೆ ಸರಕಾರದಿಂದ ತರಬೇತಿ ವ್ಯವಸ್ಥೆ ಇದೆ. ಆದರೆ ಖಾಸಗಿ ಶಿಕ್ಷಕರಿಗೆ ಸರಕಾರದ ವತಿಯಿಂದ ತರಬೇತಿ ನೀಡಲಾಗುತ್ತಿಲ್ಲ. ಈ ಸಂದರ್ಭದಲ್ಲಿ MEIF ವತಿಯಿಂದ ಇಂತಹ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದರು.
MEIF ಅಧ್ಯಕ್ಷರಾದ ಮೂಸಬ್ಬ ಬ್ಯಾರಿ ಅಧ್ಯಕ್ಷ ಭಾಷಣ ಮಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್ ತರಬೇತಿ ನೀಡಿದರು. MEIF ಪ್ರೋಗ್ರಾಂ ಸೆಕ್ರೆಟರಿ ರಿಯಾಝ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು. ಬರಾಕಾ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರಾದ ಬಲ್ಕೀಸ್ ಬೇಗಂ ಅವರು ಬರಾಕಾ ಸಂಸ್ಥೆಯ ಅಧ್ಯಕ್ಷರ ಸಂದೇಶ ವಾಚಿಸಿದರು.
MEIF ಪ್ರ.ಕಾರ್ಯದರ್ಶಿ ಬಿ.ಎ. ನಝೀರ್ ಸ್ವಾಗತಿಸಿದರು. ಬರಕಾ ಸ್ಕೂಲ್ ವ್ಯವಸ್ಥಾಪಕರಾದ ನೌಸ್ರೀನ್ ವಂದಿಸಿದರು. ನಾಳಿನ ತರಬೇತಿ ಕಾರ್ಯಕ್ರಮವನ್ನು ಪಿ.ಎ.ಕಾಲೇಜಿನ ಪ್ರಾಂಶುಪಾಲ ಸರ್ಫ್ರಾಝ್ ಜೆ.ಹಾಶೀಂ ನಡೆಸಿ ಕೊಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.