ತಂದೆ ತಾಯಿಗೆ ಬೈಯುವುದು ತಪ್ಪಲ್ಲ, ಮೋದಿ, ಶಾ ವಿರುದ್ದದ ಮಾತನ್ನು ಸಹಿಸುವುದಿಲ್ಲ: ಬಿಜೆಪಿ ನಾಯಕ ಚಂದ್ರಕಾಂತ್ ಪಾಟೀಲ್

ಮುಂಬೈ, ಅ. 8: ನಿಮ್ಮ ಹೆತ್ತವರನ್ನು ನಿಂದಿಸಿದರೆ ಸಹಿಸಿಕೊಳ್ಳಿ, ಆದರೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಒಂದೇ ಒಂದು ನಿಂದನೆಯ ಪದವನ್ನು ಕೂಡ ಸಹಿಸಿಕೊಳ್ಳಬೇಡಿ ಎಂದು ಮಹಾರಾಷ್ಟ್ರ ಬಿಜೆಪಿ ಘಟಕದ ಮಾಜಿ ವರಿಷ್ಠ, ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಸಚಿವ ಚಂದ್ರಕಾಂತ ಪಾಟೀಲ್ ಅವರು ಹೇಳಿದ್ದಾರೆ. ವಿವಾದಾತ್ಮಕ ಹೇಳಿಕೆಗಳಿಗೆ ಕುಖ್ಯಾತರಾಗಿರುವ ಪಾಟೀಲ್, ಪುಣೆಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡುವ ಮೂಲಕ ವಿವಾದ ಹುಟ್ಟು ಹಾಕಿದ್ದಾರೆ.
‘‘ಹೆತ್ತವರನ್ನು ನಿಂದಿಸಿದರೆ ತೊಂದರೆ ಇಲ್ಲ. ಅದು ಕೊಲ್ಹಾಪುರದಲ್ಲಿ ಸಾಮಾನ್ಯ. ಆದರೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಒಂದೇ ಒಂದು ನಿಂದನೆಯ ಪದವನ್ನು ಸಹಿಸಿಕೊಳ್ಳಬೇಡಿ’’ ಎಂದು ಪಾಟಿಲ್ ಹೇಳಿದ್ದಾರೆ. ಈ ಹೇಳಿಕೆ ಬಗ್ಗೆ ಪಾಟೀಲ್ ವಿರುದ್ಧ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ. ‘‘ಅವರು ತಮ್ಮ ನಾಯಕರನ್ನು ಪ್ರಶಂಸಿಸಬಹುದು. ಆದರೆ, ಅವರು ಮಹಾರಾಷ್ಟ್ರ ಹಾಗೂ ಕೊಲ್ಹಾಪುರದ ಸಂಸ್ಕೃತಿಗೆ ಧಕ್ಕೆ ಉಂಟು ಮಾಡಬಾರದು. ನಾಯಕರು ತಮ್ಮ ನಾಯಕರನ್ನು ಪ್ರಶಂಶಿಸುವಾಗ ಎಚ್ಚರಿಕೆ ವಹಿಸಬೇಕು.
ಹೆತ್ತವರನ್ನು ನಿಂದಿಸುವುದು ಸ್ವೀಕಾರಾರ್ಹವಲ್ಲ’’ ಎಂದು ಎನ್‌ಸಿಪಿ ಶಾಸಕ ರೋಹಿತ್ ಪವಾರ್ ಹೇಳಿದ್ದಾರೆ. ‘‘ಹೆತ್ತವರನ್ನು ನಿಂದಿಸುವುದು ಬಿಜೆಪಿಯ ಹಿಂದುತ್ವ’’ ಎಂದು ಶಿವಸೇನೆಯ ವಕ್ತಾರ ಮನೀಶ್ ಕಾಯಂಡೆ ಅವರು ವ್ಯಂಗ್ಯವಾಗಿ ಟೀಕಿಸಿದ್ದಾರೆ. ಪಾಟೀಲ್ ಅವರು ವಿವಾದಕ್ಕೆ ಸಿಲುಕುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅವರು ಎನ್‌ಸಿಪಿಯ ಲೋಕಸಭೆ ಸಂಸದೆ ಸುಪ್ರಿಯಾ ಸುಳೆ ಅವರ ಬಗ್ಗೆ ಸ್ತ್ರೀ ವಿರೋಧಿ ಹೇಳಿಕೆ ನೀಡಿದ್ದರು. ‘‘ಅವರು ಮನೆಗೆ ಹೋಗಿ ಅಡುಗೆ ಮಾಡಲಿ’’ ಎಂದು ಅವರು ಹೇಳಿದ್ದರು. ಒಬಿಸಿಗಳಿಗೆ ಕೋಟಾದ ಸಂದರ್ಭದಲ್ಲಿ ಸುಳೆ ಅವರ ವಿರುದ್ಧ ನೀಡಿದ ಇನ್ನೊಂದು ಹೇಳಿಕೆ ಬಗ್ಗೆ ಕೂಡ ಚಂದ್ರಕಾಂತ್ ಪಾಟೀಲ್ ಇದುವರೆಗೆ ಕ್ಷಮೆ ಯಾಚಿಸಿಲ್ಲ.







