ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ; ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಶ್ರೀಗಳ 240 ದಿನಗಳ ಧರಣಿ ಸತ್ಯಾಗ್ರಹ ಅಂತ್ಯ

ಬೆಂಗಳೂರು, ಅ. 8: ಪರಿಶಿಷ್ಟ ಜಾತಿ(ಎಸ್ಸಿ) ಮತ್ತು ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳ ಸಂಬಂಧ ಸಚಿವ ಸಂಪುಟ ಸಭೆ ಅನುಮೋದನೆ ಹಿನ್ನೆಲೆಯಲ್ಲಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಅವರು 240 ದಿನಗಳಿಂದ ಕೈಗೊಂಡಿದ್ದ ಧರಣಿ ಸತ್ಯಾಗ್ರಹವನ್ನು ಕೈಬಿಟ್ಟಿದ್ದಾರೆ.
ಶನಿವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಖುದ್ದು ಭೇಟಿ ಮಾಡಿದ ಸ್ವಾಮೀಜಿ ಅಭಿನಂದನೆ ಸಲ್ಲಿಸಿದರು. ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸದನ ಉಭಯ ನಾಯಕರ ಸಭೆ ಕರೆದು, ಸಂಪುಟ ಸಭೆ ನಡೆಸಿ ಪರಿಶಿಷ್ಟರ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಸಂಬಂಧಿಸಿದಂತೆ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ. ಹೀಗಾಗಿ ಸಮುದಾಯದ ಪರವಾಗಿ ಅವರಿಗೆ ಅಭಿನಂದನೆಗಳು' ಎಂದು ಶ್ರೀಗಳು ತಿಳಿಸಿದರು.
ಎಸ್ಸಿ-ಎಸ್ಟಿ ವರ್ಗದ 151 ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಿದಂತೆ ಆಗಿದೆ. ಎಲ್ಲ ಸಚಿವರು, ಶಾಸಕರು, ಎಸ್ಸಿ-ಎಸ್ಟಿಮಠಾಧೀಶರಿಗೆ ಕೃತಜ್ಞತೆಸಲ್ಲಿಸುತ್ತೇನೆ. ನಾಳೆ(ಅ.9)ಮಹರ್ಷಿವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ಧರಣಿಸತ್ಯಾಗ್ರಹವನ್ನು ಅಂತ್ಯಗೊಳಿಸಲಿದ್ದು,ನಾಳೆವಾಲ್ಮೀಕಿ ಜಯಂತಿಯನ್ನುವಿಜಯೋತ್ಸವವಾಗಿ ಆಚರಿಸುತ್ತೇವೆ' ಎಂದು ಪ್ರಸನ್ನಾನಂದ ಸ್ವಾಮೀಜಿ ತಿಳಿಸಿದರು.
ಶ್ರೀಗಳಿಗೆ ಸಿಎಂ ಅಭಿನಂದನೆ: ಇದೇ ಸಂದರ್ಭದಲ್ಲಿ ಎಸ್ಸಿ-ಎಸ್ಟಿಸಮುದಾಯಕ್ಕೆಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಆಗ್ರಹಿಸಿ ಸುದೀರ್ಘ ಅವಧಿ 240 ದಿನಗಳ ಕಾಲ ಧರಣಿ ಸತ್ಯಾಗ್ರಹ ನಡೆಸಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅವರನ್ನು ಅಭಿನಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶ್ರೀಗಳಿಗೆ ಸಿಹಿ ತಿನ್ನಿಸಿ ಧರಣಿ ಸತ್ಯಾಗ್ರಹ ಕೈಬಿಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾದರ ಚೆನ್ನಯ್ಯ ಗುರುಪೀಠದ ಶ್ರೀ ಮಾದರ ಚೆನ್ನಯ್ಯ ಸ್ವಾಮಿ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿ, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮಿ, ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮಿ, ಸಚಿವರಾದ ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಆನಂದ ಸಿಂಗ್, ಶಂಕರ ಪಾಟೀಲ್ ಮುನೇನಕೊಪ್ಪ, ಆರ್.ಅಶೋಕ್, ಶಾಸಕರಾದ ರಾಜುಗೌಡ, ರೇಣುಕಾಚಾರ್ಯ ಹಾಜರಿದ್ದರು.
ಸಾಮಾಜಿಕ ನ್ಯಾಯ ಒದಗಿಸಲು ಬದ್ಧ: ‘ಎಸ್ಸಿ-ಎಸ್ಟಿ ಸಮುದಾಯಗಳ ಮೀಸಲಾತಿ ಪ್ರಮಾಣ ಹೆಚ್ಚಿಸಿದ ಹಿನ್ನೆಲೆಯಲ್ಲಿ ತಮ್ಮ ಪ್ರೀತಿ, ವಿಶ್ವಾಸವನ್ನು ವ್ಯಕ್ತಪಡಿಸಿ ಸಮಸ್ತ ಸಮಾಜ ಬಾಂಧವರಿಗೆ ಚಿರಋಣಿಯಾಗಿದ್ದೇನೆ. ನಾಡಿನ ಸಮಗ್ರ ಏಳ್ಗೆಗಾಗಿ, ಸಾಮಾಜಿಕ ನ್ಯಾಯ ಒದಗಿಸಲು ಹಾಗೂ ನುಡಿದಂತೆ ನಡೆಯಲು ನಾನು ಹಾಗೂ ನಮ್ಮ ಸರಕಾರ ಸದಾ ಕಟಿಬದ್ಧವಾಗಿದೆ ಎಂದು ಸ್ಪಷ್ಟಪಡಿಸುತ್ತೇನೆ'
-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ







