ಸಮಾಜದ ಅಭಿವೃದ್ಧಿಯಲ್ಲಿ ಮಾನಸಿಕ ಆರೋಗ್ಯವೂ ಪ್ರಮುಖ ಪಾತ್ರವಹಿಸುತ್ತದೆ: ದ.ಕ. ಡಿಸಿ ಡಾ.ರಾಜೇಂದ್ರ
ಮಂಗಳೂರು, ಅ.8: ದೇಶದ ಪ್ರಗತಿಯಲ್ಲಿ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ಮಾನಸಿಕ ಆರೋಗ್ಯವೂ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ಮಾನಸಿಕ ಆರೋಗ್ಯವು ಕಾಳಜಿಯ ವಿಷಯವಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅಭಿಪ್ರಾಯಪಟ್ಟರು.
ಇಂಚರ ಫೌಂಡೇಶನ್ ವತಿಯಿಂದ ನಗರದ ಸ್ಕೋಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಸಭಾಂಗಣದಲ್ಲಿ ಶನಿವಾರ ನಡೆದ ‘ಮಾನಸಿಕ ಆರೋಗ್ಯ ಉಪಕ್ರಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾನಸಿಕ ಆರೋಗ್ಯ ಅಭಿಯಾನದ ಪುಸ್ತಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಡಾ. ರಮೀಳಾ ಶೇಖರ್ ‘ಸಮಕಾಲೀನ ಸಮಾಜದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಇಂಚರ ಆಪ್ತ ಸಮಾಲೋಚನ ಸಹಾಯವಾಣಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ಉದ್ಘಾಟಿಸಿದರು. ಇಂಚರ ಫೌಂಡೇಶನ್‌ನ ನಿರ್ದೇಶಕ ಪ್ರೀತಂ ರೋಡ್ರಿಗಸ್ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಆಲಿಸ್ಟರ್ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ವ್ಯವಸ್ಥಾಪಕ ಯೋಗೀಶ್ ಮಲ್ಲಿಗೆಮಾಡು ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕಿ ಸುಮನಾ ವಂದಿಸಿದರು. ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು.