ಪ್ರವಾಸಿತಾಣ ಹಾರಂಗಿಯಲ್ಲಿ ಮತ್ತೆರಡು ಆಕರ್ಷಣೆಗಳ ಸೇರ್ಪಡೆ: ವೃಕ್ಷೋದ್ಯಾನ, ಸಾಕಾನೆಗಳ ಶಿಬಿರ ಉದ್ಘಾಟನೆ
ಮಡಿಕೇರಿ ಅ.8 : ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿತಾಣ ಹಾರಂಗಿ ಜಲಾಶಯದ ಬಲದಂಡೆಯ ಮೇಲಿನ ಸುಮಾರು 40 ಎಕರೆ ವಿಶಾಲ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಿರುವ ವೃಕ್ಷೋದ್ಯಾನ ಹಾಗೂ ಸಾಕಾನೆಗಳ ನೂತನ ಶಿಬಿರವನ್ನು ಇಂದು ಲೋಕಾರ್ಪಣೆಗೊಳಿಸಲಾಯಿತು.
ಎರಡೂ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಹಾರಂಗಿಯಲ್ಲಿ ಸಾಕಾನೆ ಶಿಬಿರ ಆರಂಭಿಸಲಾಗಿದೆ. ಹಸಿರಿದ್ದರೆ ಮಾತ್ರ ಉಸಿರು, ಹಾಗಾಗಿ ಅರಣ್ಯ ಇಲಾಖೆ ಎಲ್ಲೆಡೆಗಳಲ್ಲಿ ಟ್ರೀ ಪಾರ್ಕ್ ಮಾಡುತ್ತಿದೆ. ದೇವರಕಾಡುಗಳು ಪರಿಸರದ ಸಂವರ್ಧನಾ ಕೇಂದ್ರವಾಗಿವೆ. ಪರಿಸರಕ್ಕೆ ಪೂರಕವಾದ ಪ್ರವಾಸೋದ್ಯಮದ ಚಟುವಟಿಕೆಗಳು ಆಗಬೇಕಿದೆ. ಆನೆ ಸಫಾರಿ ಇತರೇ ಚಟುವಟಿಕೆಗಳನ್ನು ಹಂತ ಹಂತವಾಗಿ ತೆರೆಯಲಾಗುವುದು ಎಂದರು.
ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಮಾತನಾಡಿ, ನೂತನ ಸಾಕಾನೆ ಶಿಬಿರದಲ್ಲಿ ಸಂಜೆಯ ಸೂರ್ಯಾಸ್ತಮಾನ ಮನಮೋಹಕವಾಗಿದೆ. ಹಾರಂಗಿಯಲ್ಲಿ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಸಂಸ್ಥೆ ವತಿಯಿಂದ ಬೋಟಿಂಗ್ ವ್ಯವಸ್ಥೆ ಮಾಡಲು ಪ್ರಸ್ತಾವನೆ ಬಂದಿದೆ. ಮೈಸೂರು ಹಾಗು ಹಾಸನ ಜಿಲ್ಲೆಗಳಿಂದ ಬರುವ ಪ್ರವಾಸಿಗರಿಗೆ ಈ ಸ್ಥಳ ಪ್ರಮುಖ ಪ್ರವಾಸಿ ತಾಣವಾಗಲಿದೆ. ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಅಭಿವೃದ್ದಿ ಪಡಿಸಲಾಗುವುದು ಎಂದು ಹೇಳಿದರು.
3 ಸಾವಿರ ಗಿಡ
ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ನಿರಂಜನ ಮೂರ್ತಿ ಮಾತನಾಡಿ, ಹಾರಂಗಿಯ ಸಾಕಾನೆ ಶಿಬಿರವನ್ನು ಸಮಗ್ರವಾಗಿ ಅಭಿವೃದ್ದಿ ಪಡಿಸಿ ಹಸಿರೀಕರಣಗೊಳಿಸಲು 3 ಸಾವಿರ ಗಿಡಗಳನ್ನು ಹೊಸದಾಗಿ ನೆಡಲಾಗಿದೆ. ದುಬಾರೆ ಶಿಬಿರದಲ್ಲಿ ಸಾಕಾನೆಗಳಿಗೆ ಆಗುತ್ತಿದ್ದ ಪ್ರವಾಸಿಗರ ಒತ್ತಡವನ್ನು ನಿಯಂತ್ರಿಸಲು ಹಾರಂಗಿಯಲ್ಲಿ ಬದಲೀ ಶಿಬಿರ ತೆರೆಯಲಾಗಿದೆ. ಹಾಗೆಯೇ ಮತ್ತಿಗೋಡು ಸಾಕಾನೆ ಶಿಬಿರದ ಕೆಲವು ಸಾಕಾನೆಗಳನ್ನು ಭೀಮನಕಟ್ಟೆ ಬಳಿ ತೆರೆಯಲಾಗುವುದು. ಇನ್ನು ಮುಂದೆ ಅರಣ್ಯ ಇಲಾಖೆಯ ಪ್ರವಾಸಿತಾಣಗಳಲ್ಲಿ ಕಡ್ಡಾಯವಾಗಿ ಪ್ಲಾಸ್ಟಿಕ್ ನಿಷೇಧಗೊಳಿಸಲು ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ವಿಶೇಷ ಗಮನ ಹರಿಸಲು ಸೂಚಿಸಿದರು.
ಡಿಎಫ್ ಓ ಎ.ಟಿ.ಪೂವಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ವೃಕ್ಷೋದ್ಯಾನವನ್ನು ಕಳೆದ 2015 ರಿಂದ ಹಾರಂಗಿಯಲ್ಲಿ ಆರಂಭಿಸಲಾಗಿತ್ತು. ತೋಟಗಾರಿಕಾ ಇಲಾಖೆಯಿಂದ 40 ಎಕರೆ ಜಾಗವನ್ನು ಪಡೆದು ಶಿಬಿರ ಮಾಡಲಾಗುತ್ತಿದೆ. ಸಾಕಾನೆ ಶಿಬಿರದಲ್ಲಿ 15 ಕ್ಕಿಂತ ಹೆಚ್ಚು ಸಾಕಾನೆಗಳು ಇರಬಾರದು ಎಂಬ ನಿಯಮ ಇದ್ದುದರಿಂದ ದುಬಾರೆಯಿಂದ ಹಾರಂಗಿಗೆ 8 ರಿಂದ 10 ಸಾಕಾನೆಗಳನ್ನು ಸ್ಥಳಾಂತರಿಸಲಾಗುತ್ತಿದೆ. ಹಾರಂಗಿಯಲ್ಲಿ ಕ್ರಮೇಣ ಮೂಲ ಭೂತ ಸೌಕರ್ಯಗಳನ್ನು ಒದಗಿಸಿ ಅಭಿವೃದ್ದಿ ಪಡಿಸಲಾಗುವುದು ಎಂದರು.
ಎಸಿಎಫ್ ಗೋಪಾಲ್, ವಲಯ ಅರಣ್ಯಾಧಿಕಾರಿಗಳಾದ ಕುಶಾಲನಗರದ ಶಿವರಾಂ, ಶನಿವಾರಸಂತೆಯ ಪ್ರಫುಲ್ ಶೆಟ್ಟಿ, ಸೋಮವಾರಪೇಟೆಯ ಹೆಚ್.ಪಿ.ಚೇತನ್, ಕುಶಾಲನಗರ ಡಿವೈಎಸ್ಪಿ ಗಂಗಾಧರಪ್ಪ, ವೃತ್ತ ನಿರೀಕ್ಷಕ ಬಿ.ಜಿ.ಮಹೇಶ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ, ಉಪಾಧ್ಯಕ್ಷ ಭಾಸ್ಕರ ನಾಯಕ್, ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ, ಬಸವನಹಳ್ಳಿ ಲ್ಯಾಂಪ್ಸ್ ಅಧ್ಯಕ್ಷ ಆರ್.ಕೆ.ಚಂದ್ರು, ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ ಟಿ.ಜಿ.ಪ್ರೇಮಕುಮಾರ ಮತ್ತಿತರರು ಇದ್ದರು.
::: ಶಿಬಿರದಲ್ಲಿರುವ ಸಾಕಾನೆಗಳು :::
ನೂತನ ಸಾಕಾನೆ ಶಿಬಿರದಲ್ಲಿ ದುಬಾರೆಯಿಂದ ಹಾರಂಗಿಗೆ ಸ್ಥಳಾಂತರಗೊಂಡ ಏಕದಂತ (52) ವಿಜಯ (48) ರಾಮ (68) ಮಾರುತಿ (21) ಸುಬ್ರಮಣ್ಯ (35) ವಿಕ್ರಮ (58) ಎಂಬ ಆರು ಸಾಕಾನೆಗಳಿವೆ.
ಶಿಬಿರದ ಆರಂಭದ ದಿನದಂದು ವಿಕ್ರಮನನ್ನು ಹೊರತು ಪಡಿಸಿ ಉಳಿದ ಸಾಕಾನೆಗಳಿಂದ ಆನೆಗಳ ಮಾವುತರು ಹಾಗು ಕಾವಾಡಿಗಳು ಚಟುವಟಿಕೆಗಳನ್ನು ಮಾಡಿಸಿದರು. ವಿದ್ಯಾರ್ಥಿನಿ ಸಂವೇದಿತಾ ತಂಡ ಪರಿಸರ ಗೀತೆ ಹಾಡಿದರು.
ಆನೆಕಾಡು ಅರಣ್ಯ ನಾಟಾ ಸಂಗ್ರಹಾಲಯದ ಅರಣ್ಯಾಧಿಕಾರಿ ಪೂಜಾಶ್ರೀ ನಿರೂಪಿಸಿದರು. ಸೋಮವಾರಪೇಟೆ ತಾಲ್ಲೂಕು ಎಸಿಎಫ್ ಎ.ಎ.ಗೋಪಾಲ್ ಸ್ವಾಗತಿಸಿದರು. ಕುಶಾಲನಗರ ಅರ್ ಎಫ್ ಒ ಶಿವರಾಂ ವಂದಿಸಿದರು.
ಅದಕ್ಕೂ ಮುನ್ನ ಶಾಸಕ ರಂಜನ್ ಹಾಗು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸಾಕಾನೆಗಳಿಗೆ ಪೂಜೆ ಸಲ್ಲಿಸಿ ಶಿಬಿರದ ಆವರಣದಲ್ಲಿ ಗಿಡಗಳನ್ನು ನೆಟ್ಟರು.
::: 3 ನೇ ಸಾಕಾನೆ ಶಿಬಿರ :::
ದುಬಾರೆ ಮತ್ತು ಮತ್ತಿಗೋಡು ಸಾಕಾನೆಗಳ ಶಿಬಿರಗಳ ಸಾಲಿನಲ್ಲಿ ಮೂರನೆ ಶಿಬಿರ ಇದಾಗಿದೆ.
ದುಬಾರೆ ಶಿಬಿರದಲ್ಲಿ ಸಾಕಾನೆಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಒತ್ತಡ ಹಾಗೂ ನಿರ್ವಹಣೆ ಸಮಸ್ಯೆಯಿಂದ ಹೊಸ ಶಿಬಿರ ಆರಂಭಿಸಲಾಗಿದ್ದು, ಹಾರಂಗಿ ಜಲಾಶಯದ ಬಲಭಾಗದಲ್ಲಿರುವ ಅರಣ್ಯ ಇಲಾಖೆಗೆ ಸೇರಿದ ಟ್ರೀಪಾರ್ಕ್‍ಗೆ ಹೊಂದಿಕೊಂಡಂತೆ ಇರುವ 10 ಏಕರೆ ಪ್ರದೇಶದಲ್ಲಿ ನೂತನ ಸಾಕಾನೆ ಶಿಬಿರ ನಿರ್ಮಿಸಲು ಸರಕಾರ ರೂ.50 ಲಕ್ಷ ಅನುದಾನ ಒದಗಿಸಿತ್ತು. ಅದರಂತೆಯೇ ಸಾಕಾನೆ ಶಿಬಿರದ ಜೊತೆಗೆ ಟ್ರೀಪಾರ್ಕ್ ಕೂಡ ಲೋಕಾರ್ಪಣೆಗೊಂಡಿದೆ.
ದುಬಾರೆಯಲ್ಲಿ ಒಟ್ಟು 32 ಸಾಕಾನೆಗಳಿದ್ದು, 15 ಸಾಕಾನೆಗಳನ್ನು ಹಾರಂಗಿಗೆ ಸ್ಥಳಾಂತರಿಸಲು ಯೋಜನೆ ರೂಪಿಸಲಾಗಿದ್ದು, ಪ್ರಾರಂಭಿಕ ಹಂತವಾಗಿ ಈಗಾಗಲೇ ಏಕದಂತ, ರಾಮ, ಮಾರುತಿ, ಸುಬ್ರಮಣ್ಯ, ವಿಕ್ರಮ ಹೆಸರಿನ 5 ಸಾಕಾನೆಗಳನ್ನು ಸ್ಥಳಾಂತರಿಸಲಾಗಿದೆ.
ಅಲ್ಲದೆ ದಸರಾದಲ್ಲಿ ಪಾಲ್ಗೊಂಡಿರುವ ವಿಜಯ ಆನೆ ಮೈಸೂರಿನಿಂದ ನೇರವಾಗಿ ಹೊಸ ಶಿಬಿರ ಸೇರಲಿದೆ. ಮಾವುತ ಕಾವಾಡಿಗೆಂದು ಈಗಾಗಲೇ 4 ವಸತಿಗೃಹ ನಿರ್ಮಿಸಲಾಗಿದ್ದು, 4 ಮನೆಗಳು ನಿರ್ಮಾಣ ಹಂತದಲ್ಲಿವೆ.
ಮುಂಬರುವ ದಿನಗಳಲ್ಲಿ ಪ್ರವಾಸಿಗರೊಬ್ಬರಿಗೆ ರೂ.30 ಪ್ರವೇಶ ಶುಲ್ಕ ನಿಗದಿಪಡಿಸಲಾಗುವುದು. ಹಾರಂಗಿ ಹಿನ್ನೀರಿನಲ್ಲಿ ಎರಡು ಪೆಡಲ್ ಬೋಟ್‍ಗಳಿದ್ದು, ಬೋಟಿಂಗ್ ಮಾಡಲು ಪ್ರತ್ಯೇಕವಾಗಿ ಒಬ್ಬರಿಗೆ ರೂ.50 ನಿಗದಿಪಡಿಸುವ ಯೋಜನೆ ಸಿದ್ಧಗೊಂಡಿದೆ.