ಚಿಕ್ಕಮಗಳೂರು | ಮೊಬೈಲ್‍ನಲ್ಲೇ ಸಮಸ್ಯೆ ಪರಿಹರಿಸುವುದಾಗಿ ನಂಬಿಸಿ ಮಹಿಳೆಗೆ ವಂಚನೆ ಆರೋಪ: ಜ್ಯೋತಿಷಿ ಬಂಧನ

ಚಿಕ್ಕಮಗಳೂರು, ಅ.8: ಮೊಬೈಲ್ ಮೂಲಕ ಕರೆ ಮಾಡಿಯೇ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಫೇಸ್‍ಬುಕ್ ಪೇಜ್‍ನಲ್ಲಿದ್ದ ಬರಹ ನೋಡಿ ಮಹಿಳೆಯೊಬ್ಬರು ಜ್ಯೋತಿಷಿಗೆ ಕರೆ ಮಾಡಿದ್ದು, ಆತ ವಿವಿಧ ಪೂಜೆಗಳ ನೆಪ ಹೇಳಿಕೊಂಡು ಲಕ್ಷಾಂತರ ರೂ. ಪಡೆದು ವಂಚಿಸಿರುವ ಘಟನೆ ಕಾಫಿನಾಡಿನಲ್ಲಿ ನಡೆದಿದ್ದು, ಮಹಿಳೆಯ ದೂರಿನ ಮೇರೆಗೆ ಜಿಲ್ಲೆಯ ಸಿಇಎನ್ ಪೊಲೀಸರು ಆರೋಪಿ ಜ್ಯೋತಿಷಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಸಹಕಾರ ನಗರದ ನಿವಾಸಿ ಹಾಗೂ ಜ್ಯೋತಿಷಿ ಗಣೇಶ್ ಗೊಂದಳೆ(27) ಬಂಧಿತ ಆರೋಪಿಯಾಗಿದ್ದು, ಈತ ಪೇಸ್‍ಬುಕ್‍ನ "ಪಂಡಿತ್ ಮೋದಿ ಬೆಟ್ಟಪ್ಪ ಆಸ್ಟ್ರಾಲಜಿ" ಎಂಬ ಪೇಜ್‍ನಲ್ಲಿ ಸಾರ್ವಜನಿಕರ ಎಲ್ಲ ರೀತಿಯ ಸಮಸ್ಯೆಗಳನ್ನು ಕೇವಲ ಮೊಬೈಲ್‍ನಲ್ಲೇ ಪರಿಹರಿಸುವುದಾಗಿ ಜಾಹೀರಾತು ಹಾಕಿಕೊಂಡಿದ್ದ. ಇದನ್ನು ನಂಬಿದ್ದ ನಗರದ ಮಹಿಳೆಯೊಬ್ಬರು ಜ್ಯೋತಿಷಿ ಗಣೇಶ್‍ನ ಮೊಬೈಲ್ ನಂಬರ್‍ಗೆ ಕರೆ ಮಾಡಿ ಸಮಸ್ಯೆ ಹೇಳಿಕೊಂಡಿದ್ದರು.
ಮಹಿಳೆಯ ಸಮಸ್ಯೆ ಆಲಿಸಿದ ಆರೋಪಿ ಗಣೇಶ್, ಆರಂಭದಲ್ಲಿ ಮಹಿಳೆಯ ಹೆಸರಿನಲ್ಲಿ ಪೂಜೆ ಮಾಡಬೇಕಿದ್ದು, ಅದಕ್ಕೆ 7 ಸಾವಿರ ರೂ. ಖರ್ಚಾಗುತ್ತದೆ ಎಂದು ಹೇಳಿ, ಗೂಗಲ್ ಪೇ ಮೂಲಕ 7 ಸಾವಿರ ಪಡೆದುಕೊಂಡಿದ್ದ. ನಂತರ ಮತ್ತೆ ಕರೆ ಮಾಡಿ, ವಿವಿಧ ಪೂಜೆಗಳನ್ನು ಮಾಡಬೇಕು, ಇದರಿಂದ ನಿಮ್ಮ ಎಲ್ಲ ಸಮಸೆಗಳೂ ಪರಿಹಾರ ಕಾಣಲಿವೆ ಎಂದು ನಂಬಿಸಿ ಒಟ್ಟು 1 ಲಕ್ಷ 16 ಸಾವಿರ ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದ. ಇಷ್ಟಕ್ಕೆ ಸುಮ್ಮನಾಗದ ಜ್ಯೋತಿಷಿ ಗಣೇಶ್ ಮತ್ತೆ ಕರೆ ಮಾಡಿ ಮತ್ತಷ್ಟು ಪೂಜೆ ಮಾಡಬೇಕು, ಹಣ ಹಾಕಿ ಎಂದು ಪದೇ ಪದೇ ಕರೆ ಮಾಡುತ್ತಿದ್ದ. ಜ್ಯೋತಿಷಿಯ ಕಾಟಕ್ಕೆ ಬೇಸತ್ತ ಮಹಿಳೆ ಚಿಕ್ಕಮಗಳೂರು ಪೊಲೀಸ್ ಇಲಾಖೆ ಮೊರೆ ಹೋಗಿದ್ದರು.
ಮಹಿಳೆಯಿಂದ ದೂರು ಪಡೆದ ಚಿಕ್ಕಮಗಳೂರು ಸಿಇಎನ್ ವಿಭಾಗದ ಪೊಲೀಸರು ತನಿಖೆ ನಡೆಸಿ ಬೆಂಗಳೂರು ಮೂಲದ ಜ್ಯೋತಿಷಿ ವೃತ್ತಿಯ ಗಣೇಶ್ ಗೊಂದಳೆಯನ್ನು ಬಂಧಿಸಿದ್ದು, ಬಂಧಿತ ಆರೋಪಿಯಿಂದ 87,500 ರೂ. ನಗದು, 1 ಮೊಬೈಲ್, 2 ಎಟಿಎಂ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಎಸ್ಪಿ ಉಮಾಪ್ರಶಾಂತ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸಿಇಎನ್ ವಿಭಾಗದ ಪಿಐ ಮುತ್ತುರಾಜ್, ಪಿಎಸ್ಸೈಗಳಾದ ನಾಸಿರ್‍ಹುಸೇನ್, ರಘುನಾಥ್, ಎಸ್ಸೈ ಪ್ರಕಾಶ್, ಸಿಬ್ಬಂದಿ ವಿನಾಯಕ್, ಅನ್ವರ್ ಪಾಶ ತನಿಖಾ ತಂಡದಲ್ಲಿ ಭಾಗವಹಿಸಿದ್ದರು.







