ಆರ್ಥಿಕತೆಯ ಸಮಸ್ಯೆ ನೀಗಿಸಲು, ಸ್ವಉದ್ಯೋಗಿಗಳಾಗಲು ತರಬೇತಿ ಅಗತ್ಯ: ಡಾ. ಶಿವಕುಮಾರ್
ಮೀನುಗಾರಿಕೆಯಲ್ಲಿ ಜೀವನೋಪಾಯ ಅರಿವು ಮೂಡಿಸುವ ತರಬೇತಿ ಕಾರ್ಯಕ್ರಮ

ಮಂಗಳೂರು, ಅ.8: ಮೀನುಗಾರಿಕೆಯಲ್ಲಿ ವಿವಿಧ ವಿಷಯಗಳಲ್ಲಿ ಸ್ಥಳೀಯ ಗ್ರಾಮಸ್ಥರು ಆಸಕ್ತಿ ವಹಿಸಿ ಕೃಷಿಯಲ್ಲಿ ತೊಡಗಿಸಿಕೊಂಡರೆ ಉದ್ಯಮಶೀಲರಾಗಲು ಸಹಕಾರಿಯಾಗಲಿದೆ ಎಂದು ಮೀನುಗಾರಿಕಾ ಕಾಲೇಜಿನ ಡೀನ್ ಡಾ. ಶಿವಕುಮರ್ ಎಂ. ಹೇಳಿದರು.
ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯವು ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಅನುಧಾನದ ಪರಿಶಿಷ್ಟ ಪಂಗಡ ಉಪಜಾತಿ (ಟಿಎಸ್ಪಿ) ಯೋಜನೆಯಡಿ ಮೀನುಗಾರಿಕಾ ಕಾಲೇಜಿನ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆಯ ಸಹಯೋಗದಲ್ಲಿ ಪುಣಚ ಗ್ರಾಪಂ ಸಭಾಂಗಣದಲ್ಲಿ ಇತ್ತೀಚೆಗೆ ಪರಿಶಿಷ್ಟ ಪಂಗಡದ ಜನರಿಗೆ ಹಮ್ಮಿಕೊಂಡ ‘ಮೀನುಗಾರಿಕೆಯಲ್ಲಿ ಜೀವನೋಪಾಯ ಅರಿವು ಮೂಡಿಸುವ’ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆರ್ಥಿಕ ಸಮಸ್ಯೆ ಎದುರಿಸುವವರಿಗೆ ಇಂತಹ ತರಬೇತಿಗಳು ಕುಟುಂಬದ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಸಹಕಾರಿಯಾಗಲಿವೆ. ಆರ್ಥಿಕ ಸಮಸ್ಯೆ ನೀಗಿಸಲು ಮತ್ತು ಸ್ವ ಉದ್ಯೋಗಿಗಳಾಗಲು ಸೂಕ್ತ ತರಬೇತಿ ಅಗತ್ಯವಿದೆ ಎಂದು ಡಾ. ಶಿವಕುಮರ್ ಎಂ.ಹೇಳಿದರು.
ಅತಿಥಿಗಳಾಗಿ ಪಿಡಿಒ ಲಾವಣ್ಯ ಭಾಗವಹಿಸಿದ್ದರು. ಪುಣಚ-ಕೇಪು ಗ್ರಾಮಗಳ ವನಧನ ವಿಕಾಸ ಕೇಂದ್ರದ ಅಧ್ಯಕ್ಷೆ ಮಾಲತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೀನುಗಾರಿಕಾ ಕಾಲೇಜಿನ ಪ್ರೊಫೆಸರ್, ತರಬೇತಿಯ ಸಂಯೋಜಕ ಮತ್ತು ಎಸ್ಸಿಎಸ್ಪಿ-ಟಿಎಸ್ಟಿ ಸಂಯೋಜಕ ಡಾ. ಎ.ಟಿ. ರಾಮಚಂದ್ರ ನಾಯ್ಕ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಬೆಳ್ತಂಗಡಿಯ ಸ್ನೇಹ ಸಂಜೀನಿ ಒಕ್ಕೂಟದ ಸದಸ್ಯೆ ಸಾವಿತ್ರಿ ಕೃಷ್ಣಪ್ಪಮತ್ತು ಶಾಹಿದಾ ಬೇಗಂ ಪ್ರಾತ್ಯಕ್ಷಿಯ ಮೂಲಕ ತರಗತಿ ನಡೆಸಿಕೊಟ್ಟರು.
ಸಮಾರೋಪದಲ್ಲಿ ಗ್ರಾಪಂ ಕಾರ್ಯದರ್ಶಿ ರಾಮಣ್ಣ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ನಿತಿನ್ ಮತ್ತಿತರರು ಪಾಲ್ಗೊಂಡಿದ್ದರು. ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್ ಗೌಡ ವಂದಿಸಿದರು. ರೇಣುಕಾ ಕಾರ್ಯಕ್ರಮ ನಿರೂಪಿಸಿದರು. ಲಲಿತಾ ಕೆ.ಪಿ. ಪ್ರಾರ್ಥಿಸಿದರು.