ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗಾಗಿ ಆ್ಯಕ್ಟ್‌ನಿಂದ ‘ಉಡುಪಿ ಟೂರಿಸಂ ಕನೆಕ್ಟ್-2022’

ಉಡುಪಿ, ಅ.8: ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ 15 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಸರಕಾರೇತರ ಸಂಘಟನೆ ‘ಕರಾವಳಿ ಪ್ರವಾಸೋದ್ಯಮ ಸಂಘಟನೆ (ಎಸಿಟಿ) ಮುಂದಿನ ನವೆಂಬರ್ 7ರಿಂದ 9ರವರೆಗೆ ಉಡುಪಿಯಲ್ಲಿ ‘ಉಡುಪಿ ಟೂರಿಸಂ ಕನೆಕ್ಟ್-2022’ ಎಂಬ ವಿನೂತನ ಕಾರ್ಯಕ್ರಮವೊಂದನ್ನು ಆಯೋಜಿಸಲಿದೆ ಎಂದು ಸಂಘಟನೆಯ ಅಧ್ಯಕ್ಷ ಮನೋಹರ ಎಸ್.ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಆಯ್ದ ಸುಮಾರು 60 ಮಂದಿ ಟ್ರಾವೆಲ್ ಏಜೆಂಟ್‌ರು, ಬ್ಲಾಗ್ ಬರಹಗಾರರು, ಇವೆಂಟ್ ಸಂಯೋಜಕರು, ಮೈಸ್ ಸಂಯೋಜಕರು, ಪ್ರವಾಸೋದ್ಯಮದ ಮಾಧ್ಯಮ ಸಲಹೆಗಾರರು, ಪತ್ರಕರ್ತರು ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.
ಇವರೆಲ್ಲರಿಗೂ ಮೂರು ದಿನಗಳ ಕಾಲ ಉಡುಪಿ ಜಿಲ್ಲೆಯ ಸಮಗ್ರ ಪರಿಚಯ ಮಾಡಿಕೊಡುವುದರ ಜೊತೆಗೆ ಪ್ರವಾಸೋದ್ಯಮದ ಸಾಧ್ಯತೆ ಕುರಿತೂ ಮಾಹಿತಿ ನೀಡಲಿದ್ದೇವೆ. ಇವರಿಗಾಗಿ ನ.8ರ ಬುಧವಾರ ಉಡುಪಿಯ ಹೊಟೇಲ್ ಕಿದಿಯೂರಿನಲ್ಲಿ ಒಂದು ದಿನದ -ಬಿ ಟು ಬಿ- ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದರು.
ಅಂತಾರಾಷ್ಟ್ರೀಯ ಮಟ್ಟ ಟೂರಿಸಂ ರೋಡ್‌ಶೋ ಮಾದರಿಯಲ್ಲಿ ಜರಗುವ ಈ ಕಾರ್ಯಕ್ರಮದಲ್ಲಿ ಉಡುಪಿ ಪ್ರವಾಸೋದ್ಯಮ ಭಾಗಿದಾರರೊಂದಿಗೆ ಹೊರಗಿನಿಂದ ಆಹ್ವಾನಿತರಾಗಿ ಬಂದವರ ಮುಖಾಮುಖಿ, ನೆಟ್‌ವರ್ಕಿಂಗ್ ಹಾಗೂ ಒಡಂಬಡಿಕೆಗಳನ್ನು ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಇದರಲ್ಲಿ ಉಡುಪಿಯ 50 ಮಂದಿಗೆ ಮಾತ್ರ ಭಾಗವಹಿಸಲು ಅವಕಾಶವಿದ್ದು ಆಸಕ್ತರು ಅ.25ರೊಳಗೆ ಹೆಸರು ನೊಂದಣಿ ಮಾಡಿಕೊಳ್ಳುವಂತೆ ಮನೋಹರ ಶೆಟ್ಟಿ ಮನವಿ ಮಾಡಿದರು.
ಅಪರಾಹ್ನದ ಬಳಿಕ ಸಾರ್ವಜನಿಕರ ಭಾಗವಹಿಸುವಿಕೆಯಲ್ಲಿ ಉಡುಪಿ ಪ್ರವಾಸೋದ್ಯಮದ ಭವಿಷ್ಯ, ಹೊಸ ಸರಳೀಕೃತ ಸಿಆರ್‌ಝಡ್ ನಿಯಮಾವಳಿ, ಹೊಸ ಹೊಟೇಲ್, ಹೋಮ್‌ಸ್ಟೇ ಪ್ರಾರಂಭಿಸುವ ವಿಧಾನ, ಬ್ಯಾಂಕಿನ ಆರ್ಥಿಕ ಸಹಕಾರ ಮುಂತಾದ ವಿಷಯಗಳ ಕುರಿತು ಉಪನ್ಯಾಸ, ಗೋಷ್ಠಿ ಹಾಗೂ ಚರ್ಚೆ ನಡೆಯಲಿದೆ ಎಂದರು.
ಈ ಕುರಿತು ಹೆಚ್ಚಿನ ಮಾಹಿತಿಗಳಿಗಾಗಿ ಸಂಘಟನೆಯ ಎಂ.ಅಶ್ವಿನಿ ಹೆಬ್ಬಾರ (ಮೊ:9964246776) ಅಥವಾ ರಾಜೇಶ್ವರ ಶೆಟ್ಟಿ (ಮೊ:9243310601) ಇವರನ್ನು ಸಂಪರ್ಕಿಸುವಂತೆ ಮನೋಹರ ಶೆಟ್ಟಿ ಹಾಗೂ ಕಾರ್ಯಕ್ರಮದ ಸಂಚಾಲಕ ಮರವಂತೆ ನಾಗರಾಜ ಹೆಬ್ಬಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಶಶಿಧರ ಶೆಟ್ಟಿ ಎರ್ಮಾಳ್, ಸುಭಾಷಿತ್‌ಕುಮಾರ್, ವಿಜಯಶಂಕರ ಶೆಣೈ ಹಾಗೂ ಚಂದ್ರಕಾಂತ ಡಿ. ಉಪಸ್ಥಿತರಿದ್ದರು.







