ಶಾಂತಿಸ್ಥಾಪನೆ ಬಳಿಕವಷ್ಟೇ ಈಶಾನ್ಯ ಭಾರತದಲ್ಲಿ ಆಫ್ಸ್ಪಾ ಹಿಂತೆಗೆತ: ಅಮಿತ್ ಶಾ ಹೇಳಿಕೆ

ಗುವಾಹಟಿ,ಅ.8: ಈಶಾನ್ಯ ಭಾರತದಲ್ಲಿ ಶಾಂತಿ ಸ್ಥಾಪನೆಯಾದ ಬಳಿಕವಷ್ಟೇ ತಾನು ಸಶಸ್ತ್ರ ಪಡೆಗಳ (ವಿಶೇಷಾಧಿಕಾರ) ಕಾಯ್ದೆ (ಆಫ್ಸ್ಪಾ)ಯನ್ನು ತೆಗೆದುಹಾಕುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ತಿಳಿಸಿದ್ದಾರೆ.
ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ನೂತನವಾಗಿ ನಿರ್ಮಿಸಲಾದ ಬಿಜೆಪಿ ಕಾರ್ಯಾಲಯ ‘ಅಟಲ್ಬಿಹಾರಿ ವಾಜಪೇಯಿ ಭವನ್’ ಉದ್ಘಾಟಿಸಿದ ಬಳಿಕ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ‘‘ ತುಷ್ಟೀಕರಣದ ಉದ್ದೇಶದಿಂದ ರಾಹುಲ್ಗಾಂಧಿ ಅವರು 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಈಶಾನ್ಯ ಭಾರತದಲ್ಲಿ ಆಫ್ಸ್ಪಾ ಕಾಯ್ದೆಯನ್ನು ಕೈಬಿಡುವ ಭರವಸೆ ನೀಡಿದ್ದರು. ಆದರೆ ಆ ಬಗ್ಗೆ ನನ್ನಲ್ಲಿ ಕೇಳಿದಾಗ, ನಾನುಮೊದಲಿಗೆ ಈಶಾನ್ಯ ಭಾರತದಲ್ಲಿ ಶಾಂತಿಸ್ಥಾಪನೆಯಾಗಬೇಗಕು. ಆನಂತರವಷ್ಟೇ ಅಪ್ಸ್ಫಾ ಕಾಯ್ದೆಯನ್ನು ತೆಗೆದುಹಾಕುವುದಾಗಿ ಹೇಳಿದ್ದೆ’’ ಎಂದು ಅಮಿತ್ ಶಾ ತಿಳಿಸಿದರು.
ಅಶಾಂತಿಯುತ ಪ್ರದೇಶಗಳಲ್ಲಿ ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಈಶಾನ್ಯ ಭಾರತದ ಕೆಲವು ಪ್ರದೇಶಗಳಲ್ಲಿ ಸಶಸ್ತ್ರ ಪಡೆಗಳು ಅಫ್ಸ್ಪಾ ಕಾಯ್ದೆಯನ್ನು 6 ತಿಂಗಳುಗಳ ಅವಧಿಗೆ ವಿಸ್ತರಿಸಿತ್ತು.
ಅಕ್ಟೋಬರ್ 1ರಂದು ನಾಗಾಲ್ಯಾಂಡ್ ಹಾಗೂ ಅರುಣಾಚಲದ ಕೆಲವು ನಿರ್ದಿಷ್ಟ ಪ್ರಾಂತಗಳಲ್ಲಿ ಎಫ್ಸ್ಪಾ ಕಾಯ್ದೆಯನ್ನು ವಿಸ್ತರಿಸಲಾಗಿತ್ತು. ಆದಾಗ್ಯೂ ಫೆಬ್ರವರಿ 28ರಂದು ಈ ಕಾಯ್ದೆಯನ್ನು ಅಸ್ಸಾಂನಲ್ಲಿ ಫೆಬ್ರವರಿ 28ರವರೆಗೆ ಹಾಗೂ ಮಣಿಪುರದಲ್ಲಿ 2021ರ ಡಿಸೆಂಬರ್ 1ರವರೆಗೆ ವಿಸ್ತರಿಸಲಾಗಿದೆ.
ಅಫ್ಸ್ಪಾ ಕಾಯ್ದೆಯು ವಿಸ್ತರಣೆಯಾದ ಬಳಿಕ ಅಮಿತ್ಶಾ ಅಸ್ಸಾಂಗೆ ಭೇಟಿ ನೀಡಿರುವುದು ಇದೇ ಮೊದಲನೆ ಸಲವಾಗಿದೆ.
ಅಸ್ಸಾಂ ಸೇರಿದಂತೆ ಈಶಾನ್ಯ ಭಾರತ ರಾಜ್ಯಗಳು ಅಭಿವೃದ್ಧಿ ಸಾಧಿಸುತ್ತಿರುವ ಬಗ್ಗೆ ಅಮಿತ್ ಶಾ ಅವರು ಈ ಸಂದರ್ಭದಲ್ಲಿ ಸಂತೃಪ್ತಿ ವ್ಯಕ್ತಪಡಿಸಿದರು. ಅಸ್ಸಾಂನಲ್ಲಿ ಬಿಜೆಪಿಯು ನಿರಂತರ ಆಡಳಿತದಿಂದಾಗಿ ಆ ರಾಜ್ಯ ಸರ್ವಾಂಗೀಣ ಪ್ರಗತಿಯನ್ನು ಸಾಧಿಸುತ್ತಿದೆ ಎಂದರು.
2014ರಿಂದ 2022ರವರೆಗಿನ ಅಲ್ಪಾವಧಿಯಲ್ಲಿ ಸಮಸ್ತ್ತ ಈಶಾನ್ಯ ಭಾರತ ಹಾಗೂ ನಮ್ಮ ಅಸ್ಸಾಂ ರಾಜ್ಯವು , ಇಂದು ಅಭಿವೃದ್ಧಿಯ ಹೊಸ ಹಾದಿಯನ್ನು ಆರಂಭಿಸಿದೆ. ಈಶಾನ್ಯ ಭಾರತ ಹಾಗೂ ಬಿಜೆಪಿಯ ಪ್ರಗತಿಯು ಜೊತೆಜೊತೆಯಾಗಿ ಸಾಗಲಿದೆ ಎಂದರು.
ಗುವಾಹಟಿಯ ನೂತನ ಬಿಜೆಪಿ ಕಾರ್ಯಾಲಯವು 95 ಸಾವಿರ ಚದರ ಅಡಿಯ ವಿಸ್ತೀರ್ಣ ಹೊಂದಿದ್ದು, ಈಶಾನ್ಯ ಭಾರತದಲ್ಲಿ ಕಮಲ ಪಕ್ಷದ ಅತಿ ದೊಡ್ಡ ಕಚೇರಿ ಇದಾಗಿದ್ದು, ಎಲ್ಲಾ ರೀತಿಯ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ.







