ವಂದೇ ಭಾರತ್ ಎಕ್ಸ್‌ಪ್ರೆಸ್ ನ ಚಕ್ರಗಳ ಚಲನೆಯಲ್ಲಿ ತೊಂದರೆ: ಪ್ರಯಾಣಿಕರು ಶತಾಬ್ದಿಗೆ ಶಿಫ್ಟ್

ಹೊಸದಿಲ್ಲಿ,ಅ.8: ನೂತನವಾಗಿ ಆರಂಭಿಸಲಾದ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ನ ಬೇರಿಂಗ್ಗಳು ಜಾಮ್ ಆದ ಹಿನ್ನೆಲೆಯಲ್ಲಿ ಅದರ ಚಕ್ರಗಳ ಚಲನೆಯಲ್ಲಿ ಅಡಚಣೆಯುಂಟಾದ ಘಟನೆ ಶನಿವಾರ ವರದಿಯಾಗಿದೆ.
‘‘ ವಾರಣಾಸಿ ವಂದೇ ಭಾರತ್ ಎಕ್ಸ್‌ಪ್ರೆಸ್ ನ’ ರೈಲಿನ ದಾನ್ಕೌರ್ ಹಾಗೂ ವಾಯಿರ್ ನಿಲ್ದಾಣಗಳ ನಡುವೆ ಸಂಚರಿಸುತ್ತಿದ್ದ ಸಂದರ್ಭ ಅದರ ಸಿ8 ಮೋಟಾರ್ ಕೋಚ್ನಲ್ಲಿ ವೈಫಲ್ಯವುಂಟಾಗಿದೆ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲಿನ ಕೋಚ್ ಗೆ ಆಗಿರುವ ಬೇರಿಂಗ್ ಜಾಮ್ ಅನ್ನು ಸರಿಪಡಿಸಲಾಗಿದೆ ಹಾಗೂ ಪ್ರಯಾಣಿಕರನ್ನು ಖುಜಾ ರೈಲು ನಿಲ್ದಾಣದಲ್ಲಿ, ಹೊಸದಿಲ್ಲಿಯಿಂದ ಆಗಮಿಸಿದ ಶತಾಬ್ದಿರೈಲಿಗೆ ವರ್ಗಾಯಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಂಧಿನಗರದಿಂದ ಮುಂಬೈಗೆ ಪ್ರಯಾಣಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ದನಕ್ಕೆ ಬಡಿದ ಅಪಘಾತವುಂಟಾಗಿತ್ತು. ಇದರಿಂದಾಗಿ ರೈಲಿನ ಎದುರಿನ ಬಂಪರ್ನಲ್ಲಿ ತೂತು ಉಂಟಾಗಿತ್ತು. ಘಟನೆಯ ಹಿನ್ನೆಲೆಯಲ್ಲಿ ರೈಲಿನ ಪ್ರಯಾಣವನ್ನು 10 ನಿಮಿಷಗಳ ಕಾಲ ತಡೆಹಿಡಿಯಲಾಗಿತ್ತು. ಗುರುವಾರದ ಘಟನೆಯಲ್ಲಿ ಇದೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನಾಲ್ಕು ಎತ್ತುಗಳಿಗೆ ಡಿಕ್ಕಿ ಹೊಡೆದಿತ್ತು. ಘಟನೆಯ ಹಿನ್ನೆಲೆಯಲ್ಲಿ ರೈಲಿನ ಸಂಚಾರ ಸ್ಥಗಿತಗೊಂಡಿತ್ತು.
ಈ ಮಧ್ಯೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಶನಿವಾರ ಹೇಳಿಕೆಯೊಂದನ್ನು ನೀಡಿ, ಜಾನುವಾರುಗಳಿಗ ರೈಲು ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಸಾಧ್ಯವಿಲ್ಲ ಹಾಗೂ ಇದನ್ನು ಗಮನದಲ್ಲಿಟ್ಟುಕೊಂಡೇ ರೈಲಿನ ವಿನ್ಯಾಸವನ್ನು ರೂಪಿಸಲಾಗಿದೆ. ಸಾಮಾನ್ಯವಾಗಿ ರೈಲಿನ ಮುಂಭಾಗದ ಮೂತಿಯನ್ನು ಸಂಪೂರ್ಣವಾಗಿ ತೆರವುಗೊಳಿಸಬಹುದಾಗಿದೆ’ ಎಂದು ಹೇಳಿದ್ದಾರೆ.







