ದೇಶದೊಳಗೆ ಧರ್ಮದ ಕಗ್ಗಂಟು: ಪಂಡಿತಾರಾಧ್ಯ ಸ್ವಾಮೀಜಿ

ಬೆಂಗಳೂರು, ಅ.8: ಧರ್ಮಗಳು ಪ್ರತಿಪಾದಿಸುವ ಸತ್ಯ, ಅಹಿಂಸೆ, ಶಾಂತಿಯನ್ನು ಧರ್ಮದ ಅನುಯಾಯಿಗಳು ಪಾಲಿಸುತ್ತಿಲ್ಲ. ಹೀಗಾಗಿಯೇ, ದೇಶದಲ್ಲಿ ಧರ್ಮದ ಕಗ್ಗಂಟು ಉಂಟಾಗಿದೆ ಎಂದು ಸಾಣೇಹಳ್ಳಿಯ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಶನಿವಾರ ನಗರದ ಅರಮನೆ ಮೈದಾನದಲ್ಲಿ ರಾಷ್ಟ್ರೀಯ ಬಸವ ಪ್ರತಿಷ್ಠಾನ ಹಮ್ಮಿಕೊಂಡಿದ್ದ, ಸರ್ವಧರ್ಮ ಸಂಸತ್-2022 ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಧರ್ಮಗಳು ಪ್ರತಿಪಾದಿಸುವ ಸತ್ಯ, ಅಹಿಂಸೆ, ಶಾಂತಿಯನ್ನು ಧರ್ಮದ ಅನುಯಾಯಿಗಳು ಪಾಲಿಸುತ್ತಿಲ್ಲ. ಮೇಲ್ನೋಟಕ್ಕೆ ಹಸನ್ಮುಖಿಯಾಗಿ ಕಂಡರೂ ಅಂತರಾಗದಲ್ಲಿ ಕ್ರೂರತೆ ಅಡಗಿರುವ ಪರಿಣಾಮ ಸಮಾಜದಲ್ಲಿ ಅಶಾಂತಿ ನೆಲೆಸಿದೆ ಎಂದರು.
ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ಹಿಂದೂ ಧರ್ಮದಲ್ಲಿದ್ದು ಸರ್ವಧರ್ಮೀದ ಸಾವಿರಾರು ಜನರಿಗೆ ಅನ್ನ, ವಿದ್ಯಾ ದಾನ ಮಾಡಿದ ಮಹಾನ್‍ಚೇತನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕಾಗಿದೆ.ಪ್ರತಿಯೊಬ್ಬರು ಅವರವರ ಧರ್ಮ ಪ್ರೀತಿಸಬೇಕು. ಬೇರೆ ಧರ್ಮ ದ್ವೇಷಿಸದೆ ಗೌರವಿಸಬೇಕು. ಧರ್ಮಗಳಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸಲು ಇದು ಸರಿಯಾದ ಸಮಯವಾಗಿದೆ ಎಂದು ಹೇಳಿದರು.
ಹೈಕೋರ್ಟಿನ ನಿವೃತ್ತ ನ್ಯಾ.ನಾಗಮೋಹನ್ ದಾಸ್ ಮಾತನಾಡಿ, ಜನರ ಕಣ್ಣೀರು ಹೊರೆಸಲು ಉದಯವಾದ ಧರ್ಮಗಳು, ಕ್ರಮೇಣ ಮೂಲಭೂತವಾದಕ್ಕೆ ತಿರುಗಿ ರಾಜಕಾರಣವಾಗಿ ಮಾರ್ಪಟ್ಟಿತ್ತು. ರಾಜಕಾರಣ ಕೋಮುವಾದವಾಗಿ, ಕೋಮುವಾದವೇ ರಾಜಕಾರಣವಾಗಿ ಸಂಘರ್ಷಕ್ಕೆ ಕಾರಣವಾಗಿದೆ ಎಂದರು.
ಇನ್ನೂ, ಕೋಮುವಾದ ಎಂದರೇ ಕೇವಲ ಒಂದು ಧರ್ಮಕ್ಕೆ ಸಂಬಂಧಿಸಿದ್ದಲ್ಲ. ಎಲ್ಲ ಧರ್ಮದ ಕೋಮುವಾದದ ವಿರುದ್ಧ ಧ್ವನಿ ಎತ್ತಿ ಧರ್ಮ ರಕ್ಷಿಸಬೇಕಾದ ಅನಿವಾರ್ಯತೆ ಹಿಂದೆಂದಿಗಿಂತಲೂ ಇಂದು ಅತ್ಯವಶ್ಯಕ ಎಂದು ಅವರು ತಿಳಿಸಿದರು.
ರಾಷ್ಟ್ರೀಯ ಬಸವ ಪ್ರತಿಷ್ಠಾನದ ಗೌರವಾಧ್ಯಕ್ಷ ರಂಜಾನ್ ದರ್ಗಾ ಮಾತನಾಡಿ, ಭಾರತೀಯರದು ಹೊರ ಹಾಕುವ ಸಿದ್ಧಾಂತವಲ್ಲ. ಎಲ್ಲರನ್ನು ಒಳಗೊಳ್ಳುವ ಸಿದ್ಧಾಂತವಾಗಿದೆ. ಭಗವದ್ಗೀತೆ, ಕುರಾನ್ ಹಾಗೂ ಬೈಬಲ್ ಸೇರಿದಂತೆ ಎಲ್ಲ ಧರ್ಮಗಳ ವಿಚಾರಗಳನ್ನು ಸ್ವೀಕರಿಸುವ ಮನೋಭಾವ ರೂಢಿಸಿಕೊಳ್ಳಬೇಕಿದೆ. ದೇಶದ ವಿಚಾರವಾಗಿ ಎಲ್ಲ ಜಾತಿ, ಧರ್ಮಗಳು ಒಂದಾಗಬೇಕು. ನಾವು ಭಾರತೀಯರು ಎಂದು ತಿಳಿಯುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾ.ವಿ.ಗೋಪಾಲಗೌಡ, ಇಸ್ರೋ ನಿವೃತ್ತ ಅಧ್ಯಕ್ಷ ಡಾ.ಎ.ಎಸ್.ಕಿರಣ್ ಕುಮಾರ್, ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿ, ಪ್ರತಿಷ್ಠಾನದ ಅಧ್ಯಕ್ಷ ಡಾ.ಎಸ್.ಎಂ.ಸುರೇಶ್, ಸ್ವಾಗತ ಸಮಿತಿ ಅಧ್ಯಕ್ಷ ಡಾ.ಎಸ್ಪಿ.ದಯಾನಂದ್, ಕಾರ್ಯಾಧ್ಯಕ್ಷರಾದ ಡಿ.ಟಿ.ಅರುಣ್ ಕುಮಾರ್, ಸಿ.ಎಸ್.ಬೋಪಾಯ್ಯ ಸೇರಿದಂತೆ ಪ್ರಮುಖರಿದ್ದರು.







