ಪಾಕಿಸ್ತಾನ: ಅಪಹೃತ ಸಚಿವ ಬೇಗ್ ಬಿಡುಗಡೆ
ಬಲೂಚಿಸ್ತಾನ, ಅ.8: ಉತ್ತರ ಪಾಕಿಸ್ತಾನದ ಗಿಲ್ಗಿಟ್ ಬಾಲ್ಟಿಸ್ತಾನದಲ್ಲಿ ತೆಹ್ರೀಕ್ - ಇ- ತಾಲಿಬಾನ್ ಉಗ್ರರಿಂದ ಅಪಹರಿಸಲ್ಪಟ್ಟಿದ್ದ ಗಿಲ್ಗಿಟ್ ಪ್ರಾಂತದ ಸಚಿವ ಅಬೈದುಲ್ಲಾ ಬೇಗ್ ಹಾಗೂ ಇತರ ಇಬ್ಬರನ್ನು ಶನಿವಾರ ಬಿಡುಗಡೆಗೊಳಿಸಲಾಗಿದೆ ಎಂದು ವರದಿಯಾಗಿದೆ.
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ಖಾನ್ ಅವರ ಪಿಟಿಐ ಪಕ್ಷದ ಸಂಸದರಾಗಿರುವ ಬೇಗ್, ಗಿಲ್ಗಿಟ್ ಪ್ರಾಂತದ ವಿತ್ತಸಚಿವರಾಗಿದ್ದಾರೆ. ಶುಕ್ರವಾರ ಬೇಗ್ ಹಾಗೂ ಇತರ ಇಬ್ಬರು ಪ್ರವಾಸಿಗರನ್ನು ಉಗ್ರರು ಅಪಹರಿಸಿದ್ದರು ಎಂದು ವರದಿಯಾಗಿತ್ತು. ಜೈಲಿನಲ್ಲಿ ಬಂಧನದಲ್ಲಿರುವ ಕೆಲವು ಉಗ್ರರನ್ನು ಬಿಡುಗಡೆಗೊಳಿಸಬೇಕು ಎಂಬ ಷರತ್ತನ್ನು ಮುಂದಿರಿಸಲಾಗಿತ್ತು ಎಂದು ಮಾಧ್ಯಮ ವರದಿ ಮಾಡಿದೆ.
ಸರಕಾರ ನಡೆಸಿದ ಸಂಧಾನ ಮಾತುಕತೆ ಯಶಸ್ವಿಯಾಗಿದ್ದು ಬೇಗ್ ಹಾಗೂ ಇತರ ಇಬ್ಬರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ. ಆದರೆ ಉಗ್ರರ ಬೇಡಿಕೆಗೆ ಸರಕಾರ ಒಪ್ಪಿದೆಯೇ ಎಂಬ ಬಗ್ಗೆ ಹೆಚ್ಚಿನ ವಿವರ ನೀಡಿಲ್ಲ.
Next Story





