ಸಂಘರ್ಷಕ್ಕೆ ಎಡೆ ಮಾಡುವುದು ಧರ್ಮವೇ ಅಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಅ.8:ಧರ್ಮಗಳು ಮಾನವನ ಉದ್ಧಾರಕ್ಕಾಗಿಯೇ ಇವೆ. ಆದರೆ, ಯಾವ ಧರ್ಮ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತದೆಯೋ ಅದು ಧರ್ಮವೇ ಅಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಶನಿವಾರ ನಗರದ ಅರಮನೆ ಮೈದಾನದಲ್ಲಿ ರಾಷ್ಟ್ರೀಯ ಬಸವ ಪ್ರತಿಷ್ಠಾನ ಹಮ್ಮಿಕೊಂಡಿದ್ದ, ಸರ್ವಧರ್ಮ ಸಂಸತ್-2022 ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮಗಳು ಮಾನವನ ಉದ್ಧಾರಕ್ಕಾಗಿ ಇದೆಯೇ ಹೊರತಾಗಿ ಸಂಘರ್ಷಕ್ಕಾಗಿ ಅಲ್ಲ ಎಂದರು.
ಹುಟ್ಟುವಾಗ ನಮಗೆ ಯಾವುದೇ ಧರ್ಮ ಇರುವುದಿಲ್ಲ. ಜಗತ್ತನ್ನು ಬಿಟ್ಟು ಹೋಗುವಾಗಲೂ ಯಾವುದೇ ಧರ್ಮ ಇರುವುದಿಲ್ಲ. ಆದರೆ ಬದುಕಿನಲ್ಲಿ ನಾವು ಹಲವಾರು ಧರ್ಮಕ್ಕೆ ಸೇರುತ್ತೇವೆ. ನಂತರ ಜಾತಿ, ಉಪಜಾತಿ, ಪಂಗಡಕ್ಕೆ ಸೇರುತ್ತೇವೆ. ಇವೆಲ್ಲವೂ ಸಾಮಾಜಿಕ ವ್ಯವಸ್ಥೆಯಾಗಿ ನಾವು ಮನುಜರು ಕಾಲಕಾಲಕ್ಕೆ ಮಾಡಿಕೊಂಡಿರುವ ವ್ಯವಸ್ಥೆ. ಇದು ಸರಿ ತಪ್ಪು ಅನ್ನುವುದಕ್ಕಿಂತ ವ್ಯವಸ್ಥೆ ಅವಶ್ಯಕತೆ ಮತ್ತು ಅದರ ವ್ಯಾಪ್ತಿ ಎಷ್ಟಿರಬೇಕೆನ್ನುವುದು ಬಹಳ ಮುಖ್ಯ ಎಂದು ಅವರು ಹೇಳಿದರು.
ನಮ್ಮ ದೇಶಕ್ಕೆ ಚಾರಿತ್ರ್ಯ, ಸಂಸ್ಕೃತಿ, ಪರಂಪರೆ ಮತ್ತು ಪ್ರತಿ ನಾಗರಿಕನ ಚರಿತ್ರೆಯ ಮೇಲೆ ದೇಶ ತನ್ನ ಮೌಲ್ಯಗಳನ್ನು ಹೆಚ್ಚಿಕೊಳ್ಳುತ್ತದೆ ಎಂದ ಅವರು, ಎಲ್ಲರಿಗೂ ಸಮಾನ ಅವಕಾಶ, ಗೌರವ, ಮತ್ತು ಕಾಯಕ ನಿಷ್ಠೆಯ ಬದುಕನ್ನು ಬಸವಣ್ಣ ಸಾರಿದ್ದಾರೆ. ಧರ್ಮದಲ್ಲಿ ಸಮಾನತೆ ಮಾತ್ರವಲ್ಲ, ಲಿಂಗ ಬೇಧ ಮರೆತು ಅಲ್ಲಿಯೂ ಸಮಾನತೆ ತರುವ ಅಗತ್ಯವಿದೆ. ಕೌಟುಂಬಿಕ ಸಮಾನತೆಯಿಂದ ಹಿಡಿದು ಮಾನವಕುಲಕ್ಕೆ ಸಮಾನತೆ ತರಬೇಕಿದೆ ಎಂದು ಅವರು ಕರೆ ನೀಡಿದರು.
ಸಮ್ಮೇಳನಗಳಿಗೆ ಬಂದಾಗ ಒಂದು ಅಂಶವಾದರೂ ಒಳ್ಳೆಯದು ಪಡೆಯಬೇಕು, ಆಗ ಸಾರ್ಥಕತೆ ಬರುತ್ತದೆ. ಬೆಂಗಳೂರಿನಂಥ ದೊಡ್ಡ ನಗರಗಳಲ್ಲಿ ಸಮ್ಮೇಳನಗಳ ಅಗತ್ಯವಿದೆ. ಅದೇ ರೀತಿ, ಸಮ್ಮೇಳನದಲ್ಲಿ ಆಗುವ ನಿರ್ಣಯಗಳನ್ನು ಮುದ್ರಿಸಿ ಹಂಚುವ ಕೆಲಸವಾಗಬೇಕು. ಇದು ಜಗತ್ತಿಗೆ ತಿಳಿಯಬೇಕು. ಸಮ್ಮೇಳನದ ಜೀವಾಳ ಮುಂದುವರಿಯಬೇಕು ಎಂದರು.







