ಪ್ರಯೋಗಶೀಲತೆಯ ಪ್ರವಾದಿ ಮುಹಮ್ಮದ್ (ಸ.)

ಮಾನವೀಯತೆಯ ಪ್ರಾಯೋಗಿಕ ಪಾಠಗಳನ್ನು ಪೈಗಂಬರ್‌ರವರು ಮನುಕುಲದ ಮುಂದಿಟ್ಟಿದ್ದಾರೆ. ಮಾನವೀಯತೆಯ ಹೆಸರಿನಲ್ಲಿ ತಮ್ಮ ವ್ಯಕ್ತಿನಿಷ್ಠ ವಿಚಾರಧಾರೆಗಳನ್ನು ಪಸರಿಸುವ ಅಪ್ರಾಯೋಗಿಕ ಮಾನವ ತತ್ವಗಳಾಗಿರಲಿಲ್ಲ ಅವರದ್ದು. ಇಂತಹ ತತ್ವಗಳು ಕೇಳಲು ಬಹಳ ಇಂಪಾಗಿ ತೋರಿದರೂ ಮಾನವಕುಲದ ಸಹಜ ಸೈದ್ಧಾಂತಿಕ ವೈವಿಧ್ಯತೆಗಳ ಕಡೆಗೆ ಜಾಣ ಕುರುಡುತನವನ್ನು ಹೊಂದಿದೆ. ವಿಶ್ವಾಸ, ಆಚಾರವಿಚಾರಗಳು ಮತ್ತು ಸೈದ್ಧಾಂತಿಕ ಭಿನ್ನತೆಗಳನ್ನು ಉಳಿಸಿಕೊಂಡೇ ಪರಸ್ಪರ ಸಹಜೀವನ ಮತ್ತು ಸಹಬಾಳ್ವೆ ಸಾಧ್ಯವಾಗಿಸಬಲ್ಲ ಸಹೋದರತೆಯ ನಿದರ್ಶನಗಳನ್ನು ಪೈಗಂಬರರು ಬಿಡಿಸಿ ತೋರಿಸಿದ್ದಾರೆ.
ಮಾನವಕುಲ ಎಂದಿಗೂ ಒಂದೇ ಚೌಕಟ್ಟಿನ ಒಳಗಡೆ ತನ್ನನ್ನು ತಾನೇ ಕಟ್ಟಿ ಹಾಕಿಕೊಂಡಿಲ್ಲ. ವಿವಿಧ ತತ್ವಗಳು, ಸಿದ್ಧಾಂತಗಳು ಮತ್ತು ಅಚಾರವಿಚಾರಗಳನ್ನು ಹೊರಗೆಡವುತ್ತಾ ಕ್ಷಣಕ್ಷಣಕ್ಕೂ ಅದು ವಿಭಿನ್ನವಾಗಿ ಉಳಿದಿದೆ. ಬಹುತ್ವವನ್ನು ಉಸಿರಾಡುತ್ತಾ ಬಂದಿದೆ. ಈ ವೈವಿಧ್ಯತೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗಬೇಕಾದರೆ ಆಚಾರ ವಿಚಾರಗಳಲ್ಲಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿದ್ದುಕೊಂಡೇ ಮಾನವೀಯ ಸಾಮರಸ್ಯದಲ್ಲಿ ಆಧಾರಿತವಾದ ಒಳನೋಟ ಇರಬೇಕಾದದ್ದು ಅತ್ಯಗತ್ಯ. ವಿವಿಧ ಚಿಂತನಾಧಾರೆಗಳಲ್ಲಿ ಹರಿದು ಹಂಚಾಗಿ ಹೋಗಿರುವ ಪ್ರಸಕ್ತ ಕಾಲದಲ್ಲಿ ವಿಚ್ಛಿದ್ರತೆಯನ್ನೇ ಆದರ್ಶವಾಗಿಸಿಕೊಂಡ ವಿಚಾರಧಾರೆಗಳು ಮಾನವ ಕುಲದ ಮೇಲೆ ತನ್ನ ಕಬಂಧ ಬಾಹುಗಳನ್ನು ಆವರಿಸಿಕೊಂಡಿದೆ. ಪುರುಷ ಮತ್ತು ಮಹಿಳೆಯರ ನಡುವೆ, ಆಡಳಿತಗಾರ ಮತ್ತು ಪ್ರಜೆಗಳ ನಡುವೆ, ಸಿರಿವಂತ ಮತ್ತು ಬಡವನ ನಡುವೆ, ಬಿಳಿಯ ಮತ್ತು ಕರಿಯನ ನಡುವೆ, ವಿಶ್ವಾಸಿ ಮತ್ತು ಅವಿಶ್ವಾಸಿಯ ನಡುವಿನ ಸಂಘರ್ಷಗಳೇ ಆದರ್ಶಗಳಾಗುತ್ತಿವೆ. ಮನುಷ್ಯರ ನಡುವಿನ ಸಹಜ ಭಿನ್ನತೆಗಳು ಪರಸ್ಪರ ಕೂಡಿಬಾಳಲು ತೊಡಕಾಗದಂತೆ ಕಟ್ಟಲಾದ ನೈಜ ಸಾಮರಸ್ಯದ ಸಂದೇಶಗಳಿಗೆ ಜೀವನೀಡಿದ ಪೈಗಂಬರ್ ಮುಹಮ್ಮದ್(ಸ.) ರವರ ಜೀವನ ಈ ನಿಟ್ಟಿನಲ್ಲಿ ಹೆಚ್ಚು ಪ್ರಸಕ್ತವಾಗುತ್ತಿದೆ.
ಪೈಗಂಬರ್ ಮುಹಮ್ಮದ್(ಸ.)ರು ಏಕದೇವೋಪಾಸನೆ ಆಧಾರಿತ ಇಸ್ಲಾಂ ಧರ್ಮದ ಪ್ರಖರ ಪ್ರತಿಪಾದಕರಾಗಿದ್ದರು ಎನ್ನುವುದು ಇತಿಹಾಸ ಬಲ್ಲ ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಿದ್ದೂ ತನ್ನ ಆಶಯಗಳಿಗೆ ನೇರ ವಿರುದ್ಧವಾಗಿ ಬರುವ ವಿಶ್ವಾಸಗಳನ್ನು ಆಲಂಗಿಸಿಕೊಂಡ ಜನರನ್ನು ಸ್ವೀಕರಿಸಲು, ಅವರಿಗೆ ಅರ್ಹವಾದ ಸ್ವಾತಂತ್ರ್ಯಗಳನ್ನು ಕಲ್ಪಿಸಲು ಅವರ ಸಿದ್ಧಾಂತಗಳಿಗೆ ಹಿಂದೆ ಮುಂದೆ ನೋಡಬೇಕಾಗಿ ಬಂದಿಲ್ಲ. ಮದೀನಾದ ಸರ್ವಾಂಗೀಕೃತ ಆಡಳಿತಗಾರನಾಗಿದ್ದರು ಪೈಗಂಬರರು. ಆದಾಗ್ಯೂ ಮದೀನಾದಲ್ಲಿ ವಾಸಿಸುತ್ತಿದ್ದ ಯೆಹೂದಿ ಧರ್ಮವಿಶ್ವಾಸಿಗಳು ಧಾರ್ಮಿಕ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದರು. ಎಲ್ಲಾ ಧಾರ್ಮಿಕ ಗುಂಪುಗಳಿಗೆ ಅಲ್ಲಿ ಜೀವಿಸುವ ಹಕ್ಕುಗಳನ್ನು ಒದಗಿಸಲಾಗಿತ್ತು. ಅವರ ಆರಾಧನಾಲಯಗಳಿಗೆ ಸುರಕ್ಷತೆಯನ್ನು ನೀಡಲಾಗಿತ್ತು. ವಿವಾಹ, ವಿಚ್ಛೇದನೆ ಸಹಿತವಿರುವ ಸರ್ವ ಕಾನೂನಾತ್ಮಕವಾದ ವಿಚಾರಗಳಲ್ಲೂ ಅವರಿಗೆ ತಮ್ಮ ಧರ್ಮದ ಕಾನೂನುಗಳನ್ನು ಅನುಸರಿಸಲು ಅವಕಾಶವಿತ್ತು. ಶಿಕ್ಷಾಕ್ರಮಗಳ ವಿಚಾರದಲ್ಲೂ ಬಹುತ್ವವನ್ನು ಜಾರಿ ಮಾಡಲು ಪೈಗಂಬರರಿಗೆ ಸಾಧ್ಯವಾಗಿತ್ತು. ಇಂತಹ ಕಾನೂನಾತ್ಮಕ ಬಹುತ್ವ ಇತಿಹಾಸದಲ್ಲಿ ಕಾಣುವುದು ಬಹಳ ಅಪರೂಪ. ಆಧುನಿಕ ಕಾಲದಲ್ಲೂ ನಮ್ಮ ವ್ಯವಸ್ಥೆಗಳು ಇಷ್ಟೊಂದು ವಿಸ್ತೃತವಾದ ಆಲೋಚನೆಗಳಿಗೆ ತೆರೆದುಕೊಂಡಿಲ್ಲ ಎನ್ನುವುದು ಗಮನಾರ್ಹ.
ಮಾನವೀಯತೆಯ ಪ್ರಾಯೋಗಿಕ ಪಾಠಗಳನ್ನು ಪೈಗಂಬರ್‌ರವರು ಈ ಮೂಲಕ ಮನುಕುಲದ ಮುಂದಿಟ್ಟಿದ್ದಾರೆ. ಮಾನವೀಯತೆಯ ಹೆಸರಿನಲ್ಲಿ ತಮ್ಮ ವ್ಯಕ್ತಿನಿಷ್ಠ ವಿಚಾರಧಾರೆಗಳನ್ನು ಪಸರಿಸುವ ಅಪ್ರಾಯೋಗಿಕ ಮಾನವ ತತ್ವಗಳಾಗಿರಲಿಲ್ಲ ಅವರದ್ದು. ಇಂತಹ ತತ್ವಗಳು ಕೇಳಲು ಬಹಳ ಇಂಪಾಗಿ ತೋರಿದರೂ ಮಾನವಕುಲದ ಸಹಜ ಸೈದ್ಧಾಂತಿಕ ವೈವಿಧ್ಯತೆಗಳ ಕಡೆಗೆ ಜಾಣ ಕುರುಡುತನವನ್ನು ಹೊಂದಿದೆ. ವಿಶ್ವಾಸ, ಆಚಾರವಿಚಾರಗಳು ಮತ್ತು ಸೈದ್ಧಾಂತಿಕ ಭಿನ್ನತೆಗಳನ್ನು ಉಳಿಸಿಕೊಂಡೇ ಪರಸ್ಪರ ಸಹಜೀವನ ಮತ್ತು ಸಹಬಾಳ್ವೆ ಸಾಧ್ಯವಾಗಿಸಬಲ್ಲ ಸಹೋದರತೆಯ ನಿದರ್ಶನಗಳನ್ನು ಪೈಗಂಬರರು ಬಿಡಿಸಿ ತೋರಿಸಿದ್ದಾರೆ.
ತಮ್ಮ ಮರಣದ ಅಲ್ಪ ಕಾಲದ ಮುನ್ನ ಅವರು ನಡೆಸಿದ ಹಜ್ ತೀರ್ಥಯಾತ್ರೆ ಮುಗಿಸಿದ ನಂತರ ಅನುಚರರೊಂದಿಗೆ ಅವರು ಆಡಿದ ಮಾತುಗಳಲ್ಲಿ ಇದು ಸ್ಪಷ್ಟವಾಗಿ ಮೂಡಿಬಂದಿದೆ. ‘‘ಮನುಷ್ಯರೆಲ್ಲರೂ ಒಂದು ಬಾಚಣಿಗೆಯ ಹಲ್ಲಿನ ತರ ಸಮಾನರಾಗಿದ್ದಾರೆ. ಅರಬ್ ವಂಶಜನಿಗೆ ಅರಬೇತರ ವಂಶಜನಿಗಿಂತ, ಬಿಳಿಯನಿಗೆ ಕರಿಯನಿಗಿಂತ ಯಾವುದೇ ಶ್ರೇಷ್ಠತೆಯಿಲ್ಲ. ಭಕ್ತಿಯ ಹೊರತಾದ ಯಾವುದೇ ಶ್ರೇಷ್ಠತೆಯ ಮಾನದಂಡಗಳಿಲ್ಲ. ನೀವೆಲ್ಲರೂ ಪ್ರವಾದಿ ಆದಂ (ಅ.) ಎಂಬ ಒಂದೇ ತಂದೆಯ ಮಕ್ಕಳಾಗಿರುವಿರಿ. ಆ ಆದಂ (ಅ.)ರನ್ನು ಮಣ್ಣಿನಿಂದ ಸೃಷ್ಟಿ ಮಾಡಲಾಗಿದೆ. ಗತಕಾಲದಲ್ಲಿ ಚಾಲ್ತಿಯಲ್ಲಿದ್ದ ಎಲ್ಲಾ ತರದ ಜನಾಂಗೀಯ ಭೇದಭಾವಗಳಿಗೆ ನಾನಿದೋ ಕೊನೆ ಹಾಡಿದ್ದೇನೆ’’ ಎಂದು ನುಡಿದಿದ್ದಾರೆ. ಮುಂದುವರಿಸುತ್ತಾ, ‘‘ಖಂಡಿತಾ ನಿಮ್ಮ ರಕ್ತ, ಧನ ಮತ್ತು ಅಭಿಮಾನ ಈ ದಿನದ ಹಾಗೆ, ಈ ಭೂಮಿಯ ಹಾಗೆ ಮತ್ತು ಈ ತಿಂಗಳ ಹಾಗೆ ಪವಿತ್ರವಾಗಿದ್ದು, ಅದನ್ನು ಸದಾ ಸಂರಕ್ಷಿಸಬೇಕಾಗಿದೆ’’ ಎಂದು ಘೋಷಿಸುತ್ತಾರೆ. ಇತರ ಧರ್ಮೀಯರೊಂದಿಗೂ ದಯೆ, ಸೌಜನ್ಯ ಹಾಗೂ ಸಹಾನುಭೂತಿಯೊಂದಿಗೆ ವರ್ತಿಸಬೇಕಿದ್ದು ನಮ್ಮ ಧಾರ್ಮಿಕ ಆಶಯಗಳನ್ನು ಅವರ ಮೇಲೆ ಹೇರುವಂತಿಲ್ಲ ಎಂದಿದ್ದಾರೆ. ‘‘ಜನರೊಂದಿಗೆ ದಯಾಪೂರ್ವಕವಾಗಿ ವರ್ತಿಸದವನೊಂದಿಗೆ ಅಲ್ಲಾಹನು ಕೂಡಾ ದಯೆಯಿಂದ ವರ್ತಿಸಲಾರ’’ ಎಂದು ತಾಕೀತು ನೀಡಿದ್ದಾರೆ.
ಒಂದು ದಿನ ಪೈಗಂಬರ್‌ರವರು ತನ್ನ ಅನುಚರನೋರ್ವನ ಮನೆಯಲ್ಲಿ ತಂಗಿದ್ದರು. ಆ ವೇಳೆ ಯೆಹೂದಿ ಪುರೋಹಿತನಾದ ಸಅದ್ ಎಂಬವರು ಅಲ್ಲಿಗೆ ಬಂದರು. ನೇರವಾಗಿ ಪೈಗಂಬರರ ಸನ್ನಿಧಿಗೆ ದೌಡಾಯಿಸಿದ ಅವರು ಪೈಗಂಬರರ ವಸ್ತ್ರವನ್ನು ಹಿಡಿದೆಳೆ ಯುತ್ತಾರೆ. ನಂತರ ಒರಟಾದ ಧ್ವನಿಯಲ್ಲಿ ‘‘ನನ್ನ ಸಾಲ ಮರುಪಾವತಿ ಮಾಡು ಮುಹಮ್ಮದ್. ನಿಮ್ಮ ಕುಟುಂಬದವರು ಕ್ಲಪ್ತ ಸಮಯಕ್ಕೆ ಸಾಲ ಮರುಪಾವತಿ ಮಾಡುವವರಲ್ಲ’’ ಎಂದು ಅರಚಾಡುತ್ತಾರೆ. ಪೈಗಂಬರ್‌ರವರು ಯೆಹೂದಿಯ ಬಳಿಯಿಂದ ಸ್ವಲ್ಪಹಣವನ್ನು ಸಾಲ ಪಡೆದಿದ್ದರು. ಅದು ಮರುಪಾವತಿಸಬೇಕಾದ ಸಮಯ ಇನ್ನೂ ಆಗಿರಲಿಲ್ಲ. ಆದಾಗ್ಯೂ ಪೈಗಂಬರರನ್ನು ಕೋಪಗೊಳಿಸಲಿಕ್ಕೋಸ್ಕರ ಪುರೋಹಿತರು ಈ ರೀತಿ ಒರಟಾಗಿ ವರ್ತಿಸಿದ್ದರು. ಇದನ್ನು ನೋಡುತ್ತಿದ್ದ ಹಝ್ರತ್ ಉಮರ್(ರ.)ರವರಿಗೆ ಸಿಟ್ಟು ಬಂತು. ‘‘ಈತನ ತಲೆ ಉರುಳಿಸಲು ತಾವು ಅನುಮತಿ ನೀಡಿರಿ ಪೈಗಂಬರರೇ’’ ಎಂದು ಹಝ್ರತ್ ಉಮರ್(ರ.) ರವರು ರೊಚ್ಚಿಗೇಳುತ್ತಾರೆ. ‘‘ತಾವು ಆ ಪುರೋಹಿತನೊಂದಿಗೆ ಸೌಜನ್ಯತೆಯೊಂದಿಗೆ ಸಾಲದ ವಿಷಯದ ಮಾತಾಡಲು ಹೇಳಿರಿ. ಜತೆಗೆ ಸಮರ್ಪಕವಾದ ರೀತಿಯಲ್ಲಿ ಸಾಲವನ್ನು ಪಾವತಿಸಲು ನನ್ನೊಂದಿಗೂ ನಿರ್ದೇಶಿಸಿರಿ’’ ಎಂದಾಗಿತ್ತು ಪೈಗಂಬರ್ ಮುಹಮ್ಮದ್(ಸ.)ರು ಇದಕ್ಕೆ ನೀಡಿದ್ದ ಉತ್ತರ. ಸಹಬಾಳ್ವೆಯ ಅಜರಾಮರ ಮಾದರಿಯನ್ನು ನಮಗೆ ಈ ಇತಿಹಾಸದ ತುಣುಕಿನಲ್ಲಿ ಕಾಣಲು ಸಾಧ್ಯವಿದೆ.
ಧರ್ಮ ಮತ್ತು ಜಾತಿಗಳ ಸರಹದ್ದು ಮತ್ತಷ್ಟು ಸಂಕುಚಿತಗೊಂಡ ಪರಿಣಾಮ ಮಾನವೀಯ ಪರಿಗಣನೆಗಳಿಗೆ ಇಂದು ಹಲವಾರು ತಡೆಗೋಡೆಗಳು ಹುಟ್ಟಿಕೊಂಡಿವೆ. ತಮ್ಮ ಶ್ರೇಷ್ಠತೆಯ ವ್ಯಸನಗಳ ಮುಂದೆ ಮನುಜನ ಜೀವ, ರಕ್ತ, ಅಭಿಮಾನ ಯಾವುದಕ್ಕೂ ಅರ್ಹವಾದ ಮನ್ನಣೆ ದೊರಕುತ್ತಿಲ್ಲ. ಆದರೆ ಇಂತಹ ಜನಾಂಗೀಯ ಚಿಂತನೆಗಳನ್ನು ತೊಡೆದು ಹಾಕಲು ಪ್ರಯೋಗಶೀಲವಾದ ವಿಧಾನಗಳನ್ನು ಪೈಗಂಬರರು ಜಾರಿ ಮಾಡಿ ತೋರಿಸಿದ್ದಾರೆ. ತನ್ನ ಕಪ್ಪುಬಣ್ಣದ ಕಾರಣಕ್ಕಾಗಿ ಬಹಳ ಕ್ರೂರವಾದ ಜನಾಂಗೀಯ ನಿಂದನೆ ಮತ್ತು ದೌರ್ಜನ್ಯಗಳನ್ನು ಅನುಭವಿಸಿದ್ದ ಹಝ್ರತ್ ಬಿಲಾಲ್(ರ.)ರನ್ನು ಜಾಗತಿಕ ಮುಸಲ್ಮಾನರ ನಡುವೆ ಸಾರ್ವಕಾಲಿಕ ಮನ್ನಣೆ ದೊರೆತ ವ್ಯಕ್ತಿಯಾಗಿ ಮಾರ್ಪಡಿಸಲು ಅವರಿಗೆ ಆ ಮೂಲಕ ಸಾಧ್ಯವಾಯಿತು. ಒಂದು ಕಾಲದಲ್ಲಿ ಗುಲಾಮಗಿರಿಯ ಕುಲುಮೆಯಲ್ಲಿ ಬೆಂದಿದ್ದ ಹಝ್ರತ್ ಬಿಲಾಲ್(ರ.)ರ ಹೆಗಲಿಗೆ ಕೈಯಿಟ್ಟುಕೊಂಡಾಗಿತ್ತು ಮಕ್ಕಾ ವಿಜಯದ ವೇಳೆ ಪೈಗಂಬರರು ಪವಿತ್ರ ಕಅಬಾ ಪ್ರವೇಶ ಮಾಡಿದ್ದು. ಪೈಗಂಬರರ ಗುಲಾಮನಾಗಿ ಬಂದಿದ್ದ ಝೈದ್(ರ.)ರವರು ಕೊನೆಗೆ ಪೈಗಂಬರರ ದತ್ತು ಪುತ್ರನ ಸ್ಥಾನವನ್ನು ಅಲಂಕರಿಸುತ್ತಾರೆ. ನಂತರ ಝೈದ್(ರ.)ರ ಮಗನಾದ ಉಸಾಮ ಬಿನ್ ಝೈದ್(ರ.)ರವರು ಪೈಗಂಬರ್‌ರ ವಿದಾಯದ ವೇಳೆ ಮತ್ತು ಹಝ್ರತ್ ಅಬೂಬಕರ್(ರ.)ರವರ ಆಡಳಿತ ಕಾಲದಲ್ಲಿ ಆಗಿನ ಇಸ್ಲಾಮಿಕ್ ರಾಷ್ಟ್ರದ ಸೇನಾಧಿಪತಿ ಕೂಡಾ ಆಗುತ್ತಾರೆ. ಜನಾಂಗೀಯ ಶೋಷಣೆಗಳ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯಾಚರಿಸಿದ ಇಂತಹ ಪ್ರಯೋಗಶೀಲ ಪರಿಹಾರಗಳು ಪೈಗಂಬರರ ಜೀವನದಲ್ಲಿ ಸಾಕಷ್ಟು ಇವೆ. ಇಂತಹ ಉಪಕ್ರಮಗಳ ಮೂಲಕ ಒಂದು ಕಾಲದಲ್ಲಿ ಗುಲಾಮರಾಗಿದ್ದವರು ಕೊನೆಗೆ ತಮ್ಮ ಒಡೆಯರಿಗಿಂತಲೂ ಮೇಲಿನ ಸಾಮಾಜಿಕ ಮತ್ತು ರಾಜಕೀಯ ಸ್ಥಾನಮಾನಗಳಿಗೆ ಬರಲು ಸಾಧ್ಯವಾಗಿತ್ತು.
ಆರ್ಥಿಕ ಅಸಮಾನತೆ ಎನ್ನುವುದು ಇಂದು ಸಾಮಾನ್ಯ ಸಂಗತಿಯಾಗಿ ಮಾರ್ಪಟ್ಟಿದೆ. ಈ ಅಸಮಾನತೆಗಳನ್ನು ಪರಿಹರಿಸುವಲ್ಲಿ ಪರಿಣಾಮಕಾರಿಯಾಗಿ ಸಹಾಯ ಮಾಡಬಲ್ಲ ವ್ಯವಸ್ಥೆಯನ್ನು ರೂಪಿಸಲು ನಮಗಿನ್ನೂ ಸಾಧ್ಯವಾಗಿಲ್ಲ. ತೆರಿಗೆ ನೀತಿಯ ಮೂಲಕ ಇಂತಹ ಆರ್ಥಿಕ ಅಸಮಾನತೆಗಳನ್ನು ಹೋಗಲಾಡಿಸುವ ಪ್ರಯತ್ನಗಳನ್ನು ಸಾಂಪ್ರದಾಯಿಕವಾಗಿ ಸರಕಾರಗಳು ಮಾಡುತ್ತಾ ಬಂದಿವೆ. ಈಗಾಗಲೇ ಬಸವಳಿದಿರುವ ಕೆಳವರ್ಗದ ಜನರೂ ಅಸಮಾನತೆಯನ್ನು ಹೋಗಲಾಡಿಸಲಿಕ್ಕಾಗಿ ಅಧಿಕ ಹೊರೆ ಹೆಗಲಿಗೆ ಹಾಕಿ ಕೊಳ್ಳಬೇಕಾದ ಪರಿಸ್ಥಿತಿಯನ್ನು ತೆರಿಗೆ ನೀತಿಗಳು ಹುಟ್ಟು ಹಾಕಿವೆ. ಆದರೆ ಪೈಗಂಬರರು ಈ ನಿಟ್ಟಿನಲ್ಲಿ ಮುಂದಿಟ್ಟಿರುವ ಝಕಾತ್ ಎಂಬ ಕಡ್ಡಾಯ ದಾನದ ವ್ಯವಸ್ಥೆ ಬಹಳ ಪರಿಣಾಮಕಾರಿಯಾಗಿದೆ. ಈ ವ್ಯವಸ್ಥೆಯಲ್ಲಿ ಅಸಮಾನತೆಯನ್ನು ನಿವಾರಿಸಲಿಕ್ಕಾಗಿ ಸರಕಾರ ಮಾಡುವ ಖರ್ಚುಗಳ ಭಾರ ಧನವಂತರಿಗೆ ಮಾತ್ರವೇ ಬರುತ್ತದೆ. ಮಾತ್ರವಲ್ಲ ಒಂದು ವರ್ಷದ ಖರ್ಚಿಗಿಂತ ಹೆಚ್ಚಿನ ಹಣದ ಸಂಗ್ರಹ ಇರುವ ಸಿರಿವಂತರಿಗೆ ತನ್ನ ನಾಡಿನಲ್ಲಿರುವ ಎಲ್ಲಾ ಬಡವರ ಏಳಿಗೆಗಾಗಿ ಕಾರ್ಯನಿರ್ವಹಿಸುವುದು ಕಡ್ಡಾಯ ಎನ್ನುವುದನ್ನೂ ಪೈಗಂಬರರು ಕಲಿಸಿದ್ದಾರೆ. ಆದುದರಿಂದಲೇ ಪೈಗಂಬರರ ಸಂದೇಶಗಳನುಸಾರ ಕಾರ್ಯನಿರ್ವಹಿಸಿದ ವ್ಯವಸ್ಥ್ಥೆಗಳಲ್ಲೆಲ್ಲಿಯೂ ಅಸಮಾನತೆ ಕಾಣಲು ಸಾಧ್ಯವಾಗುತ್ತಿಲ್ಲ.
ಹೀಗೆ ಮನುಕುಲದ ಯಾವುದೇ ಸಮಸ್ಯೆಗಳನ್ನು ತೆಗೆದರೂ ಪೈಗಂಬರರ ಜೀವನದಲ್ಲಿ ಪ್ರಯೋಗಶೀಲವಾದ ಪರಿಹಾರ ಮಾರ್ಗಗಳನ್ನು ಆಸಕ್ತರಿಗೆ ಕಂಡುಕೊಳ್ಳಲು ಸಾಧ್ಯವಿದೆ. ಈ ವರ್ಷದ ಪೈಗಂಬರರ ಜನ್ಮ್ಮದಿನಾಚರಣೆ ಅಂತಹ ಪ್ರಯೋಗಶೀಲ ಹಾಗೂ ಉಪಯುಕ್ತ ಮಾದರಿಗಳನ್ನು ಅಳವಡಿಸಲು ಪ್ರೇರಕವಾಗಲಿ ಎಂದು ಆಶಿಸೋಣ. ಎಲ್ಲರಿಗೂ ಮೀಲಾದುನ್ನಬಿ ಶುಭಾಶಯಗಳು.







