ದ.ಕ. ಜಿಲ್ಲಾದ್ಯಂತ ಮಿಲಾದುನ್ನಬಿ ಆಚರಣೆ: ಪ್ರವಾದಿ ಸಂದೇಶ ಜಾಥಾ

ಮಂಗಳೂರು, ಅ.9: ಪ್ರವಾದಿ ಮುಹಮ್ಮದ್ ಪೈಗಂಬರ್ (ಸ.ಅ) ಅವರ ಜನ್ಮದಿನ "ಮಿಲಾದುನ್ನಬಿ" ಆಚರಣೆಯು ರವಿವಾರ ದ.ಕ.ಜಿಲ್ಲಾದ್ಯಂತ ನಡೆಯಿತು.
ಮದ್ರಸಗಳ ಮಕ್ಕಳಿಂದ ಪ್ರವಾದಿ ಗುಣಗಾನದ ಹಾಡುಗಳು, ದಫ್‌ನೊಂದಿಗೆ ಮೀಲಾದ್ ರ‍್ಯಾಲಿ ನಡೆಯಿತು. ಮಕ್ಕಳಿಗೆ ಹಾಡು, ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಮದ್ರಸ, ಮಸೀದಿಗಳಲ್ಲಿ ನಡೆದ ಸಭಾ ಕಾರ್ಯಕ್ರಮಗಳಿಗೆ ಪ್ರವಾದಿ ಜೀವನದ ಸಂದೇಶ ನೀಡಲಾಯಿತು. ನಗರದ ಬಂದರ್‌ನಲ್ಲಿ ಹಲವು ಮದ್ರಸಗಳ ಮಕ್ಕಳಿಂದ ಬೃಹತ್ ಮೀಲಾದ್ ರ‍್ಯಾಲಿಯು ಸಾರ್ವಜನಿಕರ ಗಮನ ಸೆಳೆಯಿತು.
ಉಳ್ಳಾಲ, ದೇರಳಕಟ್ಟೆ, ಕೃಷ್ಣಾಪುರ ಮತ್ತಿತರ ಕಡೆ ಮೀಲಾದ್ ರ‍್ಯಾಲಿ ನಡೆಯಿತು. ರ‍್ಯಾಲಿಯಲ್ಲಿ ಮಕ್ಕಳಿಗೆ ಸಿಹಿ ತಿಂಡಿ ಹಂಚಿ, ಪಾನೀಯ ನೀಡಲಾಯಿತು. ಮೀಲಾದ್ ರ‍್ಯಾಲಿಯಲ್ಲಿ ಮಕ್ಕಳಲ್ಲದೆ ಹಿರಿಯರೂ ಪಾಲ್ಗೊಂಡು ಮಿಲಾದುನ್ನಬಿಯ ಸಡಗರ, ಸಂಭ್ರಮಕ್ಕೆ ಸಾಕ್ಷಿಯಾದರು.















