ಪರಿಶಿಷ್ಟರ ಮೀಸಲಾತಿ ಪ್ರಮಾಣ ಹೆಚ್ಚಿಸಿದ ಸಿಎಂ ಬೊಮ್ಮಾಯಿ ಕಲಿಯುಗದ ಶ್ರೀರಾಮಚಂದ್ರ: ಸಚಿವ ಶ್ರೀರಾಮುಲು
ಬೆಂಗಳೂರು, ಅ. 9:‘ಪರಿಶಿಷ್ಟರ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಐತಿಹಾಸಿಕ ತೀಮಾನವನ್ನು ಕೈಗೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಕಲಿಯುಗದ ಶ್ರೀರಾಮಚಂದ್ರನಿದ್ದಂತೆ' ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು (B. Sriramulu) ಬಣ್ಣಿಸಿದ್ದಾರೆ.
ರವಿವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಇಂದಿನ ವಾಲ್ಮೀಕಿ ಜಯಂತ್ಯುತ್ಸವವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ದಿನ. ದಲಿತ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಟ್ಟ ದಿನ' ಎಂದು ನುಡಿದರು.
‘ನ ಭೂತೋ ನ ಭವಿಷ್ಯತಿ ಎಂಬಂತೆ ಸಮುದಾಯದ ಎರಡು ಕೋಟಿ ಜನರು ಒಮ್ಮೆ ಎದ್ದು ನಿಂತರೆ ಧೂಳಿಪಟ ಆಗಲಿದೆ. ಮುಂಬರಲಿರುವ 2023ರ ಚುನಾವಣೆಯಲ್ಲಿ ವಾಲ್ಮೀಕಿ ಸಮುದಾಯದವರ ಮತ ಡಬ್ಬಿ ಒಡೆದು ಹೋಗುವ ರೀತಿಯಲ್ಲಿ ಮತ ಹಾಕಬೇಕು' ಎಂದು ಕರೆ ನೀಡಿದ ಶ್ರೀರಾಮುಲು, ‘ಬಿಎಸ್‍ವೈ ಅವರು ವಾಲ್ಮೀಕಿ ಜಯಂತಿ ಘೋಷಣೆ ಮಾಡಿದ್ದರು. ಇದೀಗ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಗಿದೆ' ಎಂದು ಹೇಳಿದರು.
‘ಅನೇಕ ಸರಕಾರಗಳು ಹಲವು ವರದಿಗಳನ್ನು ತರಿಸಿಕೊಂಡರೂ ಮೀಸಲಾತಿ ಹೆಚ್ಚಳ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ, ನಮ್ಮ ಸರಕಾರ ಕೊಟ್ಟ ಭರವಸೆಯನ್ನು ಈಡೇರಿಸಿದೆ. ಸಿಎಂ ಬೊಮ್ಮಾಯಿ ಅವರು ಸತ್ಯವಂತರು. ನೀತಿ, ಧರ್ಮವನ್ನು ಪಾಲಿಸಿದ್ದಾರೆ. ಬಸವಣ್ಣನವರ ಕಾಯಕ ತತ್ವವನ್ನು ನಂಬಿ ಅವರು ಕೆಲಸ ಮಾಡುತ್ತಿದ್ದಾರೆ' ಎಂದು ಶ್ರೀರಾಮುಲು ಮೆಚ್ಚುಗೆ ವ್ಯಕ್ತಪಡಿಸಿದ್ದರು.
‘ಕೆಲವರು ಅಹಿಂದ ಮುಖವಾಡ ಹಾಕಿದ್ದರು. ಅವರಿಗೆ ಪರಿಶಿಷ್ಟರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಲು ಸಾಧ್ಯವಾಗಲಿಲ್ಲ. ಆದರೆ, ಬಸವರಾಜ ಬೊಮ್ಮಾಯಿ ಅವರು ‘ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು' ಎಂಬಂತೆ. ಅವರಿಗೆ ಪರಿಶಿಷ್ಟರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಶ್ರೀರಾಮುಲು ಹೇಳಿದ್ದಾರೆ.
ಇದನ್ನೂ ಓದಿ: 9 ಮಂದಿಯನ್ನು ಕೊಂದ ನರಭಕ್ಷಕ ಹುಲಿಯನ್ನು ಕೊಂದ ಅರಣ್ಯಾಧಿಕಾರಿಗಳು