ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ಮಿಲಾದುನ್ನಬಿ ಆಚರಣೆ

ಉಡುಪಿ, ಅ.9: ಪ್ರವಾದಿ ಮುಹಮ್ಮದ್ ಪೈಗಂಬರ್ (ಸ.ಅ)ರವರ ಜನ್ಮದಿನ ಮಿಲಾದುನ್ನಬಿ ಆಚರಣೆಯು ಉಡುಪಿ ಜಿಲ್ಲೆಯಾದ್ಯಂತ ರವಿವಾರ ಸಂಭ್ರಮ ದಿಂದ ನಡೆಯಿತು.
ಕಾಪು, ಉಚ್ಚಿಲ, ಎರ್ಮಾಳ್, ಹೂಡೆ ಪಡುಬಿದ್ರಿ, ದೊಡ್ಡಣಗುಡ್ಡೆ, ಆತ್ರಾಡಿ, ಕುಂದಾಪುರ, ಕಾರ್ಕಳ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆದ ಮಿಲಾದ್ ರ್ಯಾಲಿಯಲ್ಲಿ ಮದ್ರಸಗಳ ವಿದ್ಯಾರ್ಥಿಗಳು, ದಫ್ ತಂಡಗಳು ಗಮನ ಸೆಳೆದವು. ಮಸೀದಿಯಿಂದ ಹೊರಟ ಜಾಥವು ಆಯಾ ಮಸೀದಿ ವ್ಯಾಪ್ತಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ವಾಪಾಸ್ಸು ಮಸೀದಿಗೆ ಆಗಮಿಸಿ ಸಮಾಪ್ತಿ ಗೊಂಡಿತು.
ಹೂಡೆಯ ಹಝ್ರತ್ ಫತವುಲ್ಲಾ ಶಾ ವಲಿಯುಲ್ಲಾ ದರ್ಗಾದಿಂದ ಹೊರಟ ಮಿಲಾದ್ ಜಾಥವು ಹಝ್ರಾತ್ ಶೇಕ್ ಉಮ್ಮರ್ ವಲಿಯಲ್ಲಾದಲ್ಲಿ ಸಮಾಪ್ತಿ ಗೊಂಡಿತು. ಹೂಡೆಯ ದುರುಸ್ಸಲಾಂ ಮದರಸದ ವಿದ್ಯಾರ್ಥಿಗಳು ಜಾಥದಲ್ಲಿ ಪಾಲ್ಗೊಂಡರು. ದೊಡ್ಡಣಗುಡ್ಡೆಯ ಮಸೀದಿಯಿಂದ ಜಾಥವು ಪ್ರಮುಖ ಬೀದಿ ಗಳಲ್ಲಿ ಸಂಚರಿಸಿ ಮಸೀದಿಯಲ್ಲಿ ಸಮಾಪ್ತಿಗೊಂಡಿತು. ಇದರಲ್ಲಿ ದಫ್ ತಂಡ ಗಳು ಆಕಷರ್ಣೀಯವಾಗಿದ್ದವು.
ಕಾಪು ತಾಲೂಕು: ಕಾಪು, ಮಜೂರು, ಮಲ್ಲಾರು, ಪಕೀರ್ಣಕಟ್ಟೆ, ಕೊಪ್ಪ ಲಂಗಡಿ ಸಹಿತ ವಿವಿಧ ಮಸೀದಿಗಳಿಂದ ಮಿಲಾದ್ ಜಾಥಾವು ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಸಾಗಿ ಕಾಪು ಪೇಟೆ ತಲುಪಿತು. ಅಲ್ಲಿಂದ ಕಾಪು ಜುಮ್ಮಾ ಮಸೀದಿಯಲ್ಲಿ ಜಾಥ ಸಮಾಪ್ತಿಗೊಂಡಿತು. ವಿವಿಧ ದಫ್ ತಂಡಗಳು, ಮದ್ರಸ ವಿದ್ಯಾರ್ಥಿಗಳು, ನೂರಾರು ವಾಹನಗಳು ಜಾಥಾಕ್ಕೆ ಮೆರುಗು ನೀಡಿತು.
ಪಡುಬಿದ್ರಿಯಲ್ಲಿ ಕಂಚಿನಡ್ಕ ಜುಮ್ಮಾ ಮಸೀದಿಯಿಂದ ಹೊರಟ ಮೀಲಾದ್ ಜಾಥಾವು ರಾಜ್ಯ ಹೆದ್ದಾರಿಯಾಗಿ ಪಡುಬಿದ್ರಿ ಪೇಟೆಯಾಗಿ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಮಾರ್ಕೆಟ್ ರಸ್ತೆಯಾಗಿ ಪಡುಬಿದ್ರಿ ಜುಮಾ ಮಸೀದಿ ತಲುಪಿತು. ಜಾಥಾದಲ್ಲಿ ಸ್ಕೌಟ್ ಮಕ್ಕಳ ಆಕರ್ಷಕ ಪಥ ಸಂಚಲನ ಗಮನ ಸೆಳೆಯಿತು.
ಹೆಜಮಾಡಿ ಜುಮ್ಮಾ ಮಸೀದಿಯಿಂದ ಹೊರಟ ಜಾಥಾವು ಕೋಡಿ ರಸ್ತೆಯ ಮೂಲಕ ಹಾದು ಹೋಗಿ ಎನ್.ಎಸ್.ರಸ್ತೆಯಾಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ಕನ್ನಂಗಾರ್ ಜುಮ್ಮಾ ಮಸೀದಿ ತಲುಪಿತು. ಪಲಿಮಾರು ಜುಮ್ಮಾ ಮಸೀದಿ-ಫಲಿಮಾರು ಪೇಟೆಯಾಗಿ ಜುಮ್ಮಾ ಮಸೀದಿ ತಲುಪಿತು. ಎರ್ಮಾಳು, ಮೂಳೂರಿನಲ್ಲೂ ಸಂಭ್ರಮ ಸಡಗರದಿಂದ ಮೀಲಾದ್ ಜಾಥಾವು ನಡೆಯಿತು. ಮೀಲಾದ್ ಮುನ್ನಾ ಪ್ರವಾದಿ ಸಂದೇಶಗಳನ್ನು ಸಾರಲಾಯಿತು. ಮಕ್ಕಳ ಪ್ರತಿಭಾ ಸ್ಪರ್ಧೆ, ಸಾರ್ವಜನಿಕ ಅನ್ನದಾನವು ನಡೆಯಿತು.
ಸೌಹಾರ್ದತೆಗೆ ಸಾಕ್ಷಿಯಾದ ಕೋಡಿ
ಕುಂದಾಪುರ: ಕೋಡಿಯಲ್ಲಿ ಇಂದು ನಡೆದ ಮಿಲಾದುನ್ನಬಿ ಆಚರಣೆಯ ಜಾಥದಲ್ಲಿ ಸ್ಥಳೀಯ ಕೋಟಿ ಚೆನ್ನಯ್ಯ ಮಿತ್ರಕೂಟದವರು ತಂಪು ಪಾನೀಯ ವಿತರಿಸುವ ಮೂಲಕ ಸೌಹಾರ್ದತೆ ಮೆರೆದರು.
ಕಡಲ ಕಿನಾರೆಯ ಹಳೆಅಳಿವೆ ಪ್ರದೇಶದಲ್ಲಿ ಬೆಳಿಗ್ಗೆ ಮುಸ್ಲಿಮರ ಈದ್ ಮೆರವಣಿಗೆ ಸಾಗುವ ಸಂದರ್ಭದಲ್ಲಿ ಕೋಟಿ ಚೆನ್ನಯ್ಯ ಮಿತ್ರಕೂಟದ ಹಿಂದೂ ಬಾಂಧವರು ಮೆರವಣಿಗೆಯಲ್ಲಿ ಸಾಗುತ್ತಿರುವವರಿಗೆ ತಂಪು ಪಾನೀಯ ನೀಡಿ ಈದ್ ಶುಭಾಶಯ ಕೋರಿದರು. ಮಸೀದಿ ಆಡಳಿತ ಮಂಡಳಿ ತಂಪು ಪಾನೀಯ ವಿತರಿಸಿದ ಮಿತ್ರ ಮಂಡಳಿ ಯವರಿಗೆ ಕೃತಜ್ಞತೆ ಸಲ್ಲಿಸಿದರು.








