ಶಶಿಕಿರಣ್ ಶೆಟ್ಟಿಗೆ ‘ಎಮಿನೆಂಟ್ ಬಂಟ್ ಪರ್ಸನಾಲಿಟಿ‘ ಪ್ರಶಸ್ತಿ ಪ್ರದಾನ
ಮಂಗಳೂರು, ಅ.9: ಜಾಗತಿಕ ಬಂಟ ಪ್ರತಿಷ್ಠಾನದ ವತಿಯಿಂದ ಉದ್ಯಮಿ, ಆಲ್‌ಕಾರ್ಗೊ ಸಮೂಹ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಶಶಿಕಿರಣ್ ಶೆಟ್ಟಿ ಅವರಿಗೆ ‘ಎಮಿನೆಂಟ್ ಬಂಟ್ ಪರ್ಸನಾಲಿಟಿ‘ ಪ್ರಶಸ್ತಿಯನ್ನು ನಗರದ ಎ.ಜೆ. ಗ್ರ್ಯಾಂಡ್ ಹೋಟೆಲ್‌ನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.
ಬಳಿಕ ಮಾತನಾಡಿದ ಅವರು ಆರ್ಥಿಕವಾಗಿ ಹಿಂದುಳಿದವರ ಮಕ್ಕಳ ವಿದ್ಯಾಭ್ಯಾಸ ಹಾಗೂ ಮನೆ ನಿರ್ಮಾಣಕ್ಕೆ ನೆರವು ನೀಡುವುದರಿಂದ ಸಮಾಜದ ಅಭ್ಯುದಯ ಸಾಧ್ಯ. ಸಂಕಷ್ಟದಲ್ಲಿ ಇರುವವರಿಗೆ ನೆರವಾಗುವುದು ನಮ್ಮ ಹೊಣೆಗಾರಿಕೆ ಎಂದರು.
ಈ ಸಂದರ್ಭ ಆಲ್‌ಕಾರ್ಗೊ ಸಮೂಹ ಸಂಸ್ಥೆಯ ವತಿಯಿಂದ ಆರ್ಥಿಕವಾಗಿ ಹಿಂದುಳಿದ 17 ಕುಟುಂಬಗಳಿಗೆ ದಾನದ ರೂಪದಲ್ಲಿ ನೀಡಿದ ಮನೆಗಳ ಕೀಲಿ ಕೈ ಹಸ್ತಾಂತರಿಸಲಾಯಿತು.
ಯಕ್ಷಗಾನ ರಂಗದಲ್ಲಿ 50 ವರ್ಷಕ್ಕೂ ಅಧಿಕ ಕಾಲ ಸೇವೆ ಸಲ್ಲಿಸಿದ ಕಂದಾವರ ರಘುರಾಮ ಶೆಟ್ಟಿಗೆ ಡಾ.ಡಿ.ಕೆ.ಚೌಟ ದತ್ತಿನಿಧಿಯಿಂದ ೨೫ ಸಾವಿರ ರೂ. ನಗದು, ಫಲಕ ನೀಡಿ ಸನ್ಮಾನಿಸಲಾಯಿತು.
ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ಸಿಎ ಶಾಂತರಾಮ ಶೆಟ್ಟಿ, ಮಂಗಳೂರು ಬಾರ್ ಅಸೋಸಿಯೇಶನ್ ಅಧ್ಯಕ್ಷ ಪೃಥ್ವಿರಾಜ್ ರೈ, ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ಪಿ.ಬಿ.ಹರೀಶ್ ರೈ, ಸಿಎ ಅಂತಿಮ ವರ್ಷದ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ತೇರ್ಗಡೆಯಾದ ಮಂದಾರ.ಪಿ.ಶೆಟ್ಟಿ, ಮತ್ತು ದರ್ಶನ್ ಶೆಟ್ಟಿ ಅವರನ್ನು ಪ್ರತಿಷ್ಠಾನದ ವತಿಯಿಂದ ಗೌರವಿಸಲಾಯಿತು.
ಜಾಗತಿಕ ಬಂಟ ಪ್ರತಿಷ್ಠಾನದ ಪೋಷಕ ಡಾ.ಬಿ.ಆರ್.ಶೆಟ್ಟಿ, ಮಾಜಿ ಅಧ್ಯಕ್ಷ ಡಾ.ಎಂ.ಶಾಂತರಾಮ ಶೆಟ್ಟಿ, ಉಪಾಧ್ಯಕ್ಷರಾದ ಕುಶಲ್ ಎಸ್. ಹೆಗ್ಡೆ, ಕೆ. ಸಚ್ಚಿದಾನಂದ ಹೆಗ್ಡೆ, ಯೋಜನಾ ನಿರ್ದೇಶಕ ಡಾ.ಬಿ. ಸಂಜೀವ ರೈ, ಖಜಾಂಜಿ ಸಿಎ ಪಿ.ರಘುಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಸಿಎ ಸುಧೀರ್ ಕುಮಾರ್ ಶೆಟ್ಟಿ ವಂದಿಸಿದರು. ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.