ಉಪಶಾಮಕ ಆರೈಕೆ ಸಮುದಾಯಗಳಿಗೆ ತಲುಪಲಿ: ಡಾ.ಡೇಜ್ ಅಹ್ಮದ್

ಉಡುಪಿ, ಅ.9: ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ಮೂಲಕ ಉಪಶಾಮಕ ಆರೈಕೆ ಸಾಮಾನ್ಯ ಜನರಿಗೆ ಮತ್ತು ಸಮುದಾಯಗಳಿಗೆ ತಲುಪಬೇಕು. ಭಾರತದಲ್ಲಿ ಉಪಶಾಮಕ ಆರೈಕೆಗೆ ಹೆಚ್ಚಿನ ಬೇಡಿಕೆ ಇದೆ. ಆದರೆ ಅರಿವು ಮತ್ತು ಜಾಗೃತಿ ಕೊರತೆಯಿಂದಾಗಿ ಮತ್ತು ಪ್ರಶಾಮಕ ಆರೈಕೆಯು ಸಮುದಾಯಗಳನ್ನು ತಲುಪಲು ವಿಫಲವಾಗಿದೆ. ಉಪಶಾಮಕ ಆರೈಕೆ ಜನರಿಗೆ ಸಿಗಲು ಸುಲಭಗೊಳಿಸಲು ಜಿಲ್ಲಾಡಳಿತ ಮತ್ತು ಆಸ್ಪತ್ರೆಗಳು ಸಹಕರಿಸಬೇಕು ಎಂದು ತಮಿಳುನಾಡು ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ಆಯುಕ್ತ ಡಾ.ಡೇಜ್ ಅಹಮದ್ ಹೇಳಿದ್ದಾರೆ.
ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶನಿವಾರ ಆಯೋಜಿಸಲಾದ ವಿಶ್ವ ವಿಶ್ರಾಂತಿ ಮತ್ತು ಪ್ರಶಾಮಕ ಆರೈಕೆ ದಿನಾ ಚರಣೆಯಲ್ಲ್ ಬ್ಲೂ ಮ್ಯಾಪಲ್‌ನ ೨ನೇ ಆವೃತ್ತಿ- ಚಿಕಿತ್ಸೆಯ ಮಿತಿ ಮತ್ತು ಜೀವನ ಅಂತ್ಯದ ಆರೈಕೆ ಕುರಿತ ಕಿರುಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತ ನಾಡುತಿದ್ದರು.
ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ಮಾಹೆಯ ಸಹ ಕುಲಾಧಿಪತಿ ಡಾ.ಎಚ್. ಎಸ್.ಬಲ್ಲಾಳ್ ಮಾತನಾಡಿ, ದಾದಿಯರ ಉತ್ತಮ ಶುಶ್ರೂಷೆಯು ರೋಗಿಗಳ ಆರೈಕೆಯಲ್ಲಿ ದೊಡ್ಡ ಬದಲಾವಣೆಯನ್ನು ಮಾಡುತ್ತದೆ. ಅವರು ರೋಗಿ ಗಳೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ. ಇದು ಜೀವನದ ಗುಣಮಟ್ಟ ಮತ್ತು ಸಾವಿನ ಘನತೆ ಮತ್ತು ಪ್ರತಿ ಮನುಷ್ಯನ ಮೇಲೆ ನೇರವಾಗಿ ಅಥವಾ ಪರೋಕ್ಷವಾಗಿ ಪ್ರಭಾವ ಬೀರುತ್ತದೆ. ಉಪಶಾಮಕ ಆರೈಕೆ ಸೇವೆಯ ಅರಿವು ರಾಜ್ಯ ಮತ್ತು ದೇಶದಲ್ಲಿ ಹೆಚ್ಚಬೇಕು ಎಂದರು.
ಮಂಗಳೂರು ಕೆಎಂಸಿಯ ಅಸೋಸಿಯೇಟ್ ಡೀನ್ ಡಾ.ಬಿ.ಸುರೇಶ್ ಕುಮಾರ್ ಶೆಟ್ಟಿ, ಉಪಶಾಮಕ ಔಷಧ ಮತ್ತು ಸಹಾಯಕ ಆರೈಕೆ ವಿಭಾಗದ ಮುಖ್ಯಸ್ಥ ಡಾ.ನವೀನ್ ಎಸ್.ಸಾಲಿನ್ಸ್ ಮೊದಲಾದವರು ಉಪಸ್ಥಿತರಿದ್ದರು. ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯನಿರ್ವಹಣಾಧಿಕಾರಿ ಡಾ.ಆನಂದ್ ವೇಣುಗೋಪಾಲ್ ಸ್ವಾಗತಿಸಿದರು. ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ವಂದಿಸಿದರು. ಡಾ.ಕೃತಿಕಾ ರಾವ್ ಕಾರ್ಯಕ್ರಮ ನಿರ್ವಹಿಸಿದರು.







