ದ.ಕ.ಜಿಲ್ಲಾಡಳಿತದಿಂದ ಶ್ರೀ ವಾಲ್ಮೀಕಿ ಜಯಂತಿ ಆಚರಣೆ

ಮಂಗಳೂರು, ಅ.9: ದ.ಕ.ಜಿಲ್ಲಾಡಳಿತ, ಜಿಪಂ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯಲ್ಲಿ ರವಿವಾರ ನಗರದ ಜಿಪಂ ನೇತ್ರಾವತಿ ಸಭಾಂಗಣದಲ್ಲಿ ಶ್ರೀ ವಾಲ್ಮೀಕಿ ಜಯಂತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ನಿಸ್ವಾರ್ಥ ಜೀವನದಿಂದ ಸಾಮಾನ್ಯ ವ್ಯಕ್ತಿಯೊಬ್ಬ ಉತ್ತಮ ವ್ಯಕ್ತಿಯಾಗಿ ಬದಲಾಗಬಹುದು ಎನ್ನುವುದಕ್ಕೆ ಮಹರ್ಷಿ ವಾಲ್ಮೀಕಿ ಉದಾಹರಣೆ. ಅವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವ ಅಗತ್ಯವಿದೆ ಎಂದರು.
ಯಾವುದೇ ಆಧುನಿಕ ಸೌಲಭ್ಯಗಳು ಇಲ್ಲದ ಕಾಲದಲ್ಲಿಯೂ ಅವರು ಭಾರತದಲ್ಲಿ ಇಂತಹ ಜಾಗ ಇಂತಹಲ್ಲಿಯೇ ಇದೆ ಎಂದು ಕಾವ್ಯದಲ್ಲಿ ಹೆಸರಿಸಿದ್ದಾರೆ. ನೋಬೆಲ್ ಪ್ರಶಸ್ತಿ ಪಡೆಯುವ ಯೋಚನೆಗಳನ್ನು ಆಗಲೇ ರಾಮಾಯಣದಲ್ಲಿ ಬರೆದುಕೊಂಡಿದ್ದಾರೆ. ಎಂದು ಡಿಸಿ ಡಾ.ರಾಜೇಂದ್ರ ಕೆ.ವಿ. ಹೇಳಿದರು.
ದ.ಕ.ಜಿಪಂ ಸಿಇಒ ಡಾ. ಕುಮಾರ್ ಮಾತನಾಡಿ ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಕೃತಿಯನ್ನು ರಚಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿಗೆ ಸಲ್ಲುತ್ತದೆ. ನಮ್ಮ ಆಚಾರ ವಿಚಾರ, ಸಂಸ್ಕೃತಿ, ನಡೆ ನುಡಿಗಳು ರಾಮಾಯಣದಲ್ಲಿದೆ ಎಂದರು.
೨೦೨೧-೨೨ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಸರಳ ವಿವಾಹ ಯೋಜನೆಯಡಿ ವಿವಾಹವಾದ ಫಲಾನುಭವಿಗಳಿಗೆ ಸನ್ಮಾನಪತ್ರ ವಿತರಿಸಲಾಯಿತು.
ಮೇಯರ್ ಜಯಾನಂದ ಅಂಚನ್ ಅತಿಥಿಯಾಗಿದ್ದರು. ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಅಂಶು ಕುಮಾರ್ ಉಪಸ್ಥಿತರಿದ್ದರು. ಸಮಗ್ರ ಗಿರಿಜನ ಆಭಿವೃದ್ಧಿ ಯೋಜನೆ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ರಶ್ಮಿ ಎಸ್.ಆರ್. ಸ್ವಾಗತಿಸಿದರು.
