ಉಡುಪಿ: ನವರಾತ್ರಿ ಉತ್ಸವದಲ್ಲಿ ವೃದ್ಧೆಯ ಚಿನ್ನದ ಸರ ಕಳವು; ಪ್ರಕರಣ ದಾಖಲು

ಉಡುಪಿ, ಅ.9: ಅಂಬಲಪಾಡಿ ಜನಾರ್ದನ ದೇವಸ್ಥಾನದಲ್ಲಿನ ನವರಾತ್ರಿ ಉತ್ಸವದಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ಕಳವು ಮಾಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಸೆ.30ರಂದು ಕಲ್ಯಾಣಪುರದ ಸಾವಿತ್ರಿ ಪೈ (82) ತಮ್ಮ ಕುಟುಂಬದವರೊಂದಿಗೆ ಅಂಬಲಪಾಡಿ ಜನಾರ್ದನ ದೇವಸ್ಥಾನಕ್ಕೆ ಹೋಗಿದ್ದು, ದೇವಸ್ಥಾನದ ಒಳಗೆ ಪ್ರದಕ್ಷಿಣೆ ಮಾಡಿ ತೀರ್ಥ ಪ್ರಸಾದ ತೆಗೆದುಕೊಂಡು ಹೊರ ಬಂದ ಬಳಿಕ ಸಾವಿತ್ರಿ ಪೈ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಇಲ್ಲದೆ ಇರುವುದು ಗಮನಕ್ಕೆ ಬಂದಿತ್ತೆನ್ನಲಾಗಿದೆ.
ನವರಾತ್ರಿ ಉತ್ಸವ ಕಳೆದ ಬಳಿಕ ಅ.8ರಂದು ದೇವಸ್ಥಾನದ ಸಿಸಿ ಕ್ಯಾಮರಾ ಪರಿಶೀಲನೆ ಬಳಿಕ, ಇಬ್ಬರು ಹೆಂಗಸರು ಸಾವಿತ್ರಿ ಪೈ ಕುತ್ತಿಗೆಯ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿದೆ. ಕಳವಾದ ಚಿನ್ನದ ಸರದ ಅಂದಾಜು ಮೌಲ್ಯ 2,80,000 ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





