ಉಡುಪಿ: ಸೊಸೈಟಿಯ ದಲಿತ ಕಾರ್ಯದರ್ಶಿಗೆ ಅವಮಾನ
ಪ್ರಕರಣ ದಾಖಲು

ಉಡುಪಿ, ಅ.9: ದಲಿತ ಎಂಬ ಕಾರಣಕ್ಕೆ ಸೊಸೈಟಿಯ ಪ್ರಭಾರ ಕಾರ್ಯದರ್ಶಿಗೆ ಅವಮಾನ ಮಾಡಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರಿಶಿಷ್ಟ ಜಾತಿಗೆ ಸೇರಿದ 76-ಬಡಗುಬೆಟ್ಟು ಗ್ರಾಮದ ಕಸ್ತೂರ್ಬಾ ನಗರದ ಪ್ರಶಾಂತ್ ಸಿ.(32) ಎಂಬವರು ಉಡುಪಿಯ ಸಾರ್ವಜನಿಕ ನೌಕರರ ಗ್ರಾಹಕರ ವಿವಿದ್ದೋಶ ಸಹಕಾರಿ ಸಂಘದ ಪ್ರಭಾರ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿಕೊಂಡಿದ್ದು, ಕಾಲಿನ ಗಾಯದಿಂದ ವೈದ್ಯಕೀಯ ನೆಲೆಯಲ್ಲಿ ರಜೆಯಲ್ಲಿದ್ದರು. ಜೂ.28ರಂದು ಕರ್ತವ್ಯಕ್ಕೆ ಹಾಜರಾಗಿದ್ದು, ಪ್ರಶಾಂತ್ ಆ.1ರಂದು ಸಂಪೂರ್ಣ ಗುಣ ಮುಖರಾದ ನಂತರ ಪ್ರಭಾರವನ್ನು ಮರಳಿ ಪಡೆದುಕೊಳ್ಳಲು ಕೇಳಿಕೊಂಡರೆನ್ನಲಾಗಿದೆ.
ಈ ವೇಳೆ ಆರೋಪಿಗಳಾದ ಅಶ್ವಿನಿ ಕುಮಾರ್, ಮಂಜುಳ, ಶ್ರೀನಿವಾಸ ಶೆಟ್ಟಿ ಸಮಾನ ಉದ್ದೇಶದಿಂದ ಪ್ರಶಾಂತ್‌ರನ್ನು ಕೀಳಾಗಿ ಕಂಡು ಅವಮಾನ ಮಾಡಿ, ತಾರತಮ್ಯ ಎಸಗುತ್ತಿದ್ದರೆಂದು ದೂರಲಾಗಿದೆ. ಸಭೆಗೆ ಕರೆಯಿಸಿ ಹೀನಾಯವಾಗಿ ನಿಂದಿಸಿ, ಏಕವಚನದಲ್ಲಿ ಏರುಧ್ವನಿಯಲ್ಲಿ ಸಭಿಕರ ಮುಂದೆ ಬೈದು, ಅವಮಾನ ಮಾಡಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





