ಕಾರ್ಮಿಕ ವರ್ಗವಿಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಎಸ್. ವರಲಕ್ಷ್ಮಿ
ಸಿಐಟಿಯು ದ.ಕ.ಜಿಲ್ಲಾ ಸಮ್ಮೇಳನ

ಮಂಗಳೂರು, ಅ.9: ಸಮಾಜದಲ್ಲಿ ಸಂಪತ್ತು ಸೃಷ್ಟಿಸುವ ಕಾರ್ಮಿಕ ವರ್ಗ ಮಾತ್ರವೇ ದೇಶದ ಆರ್ಥಿಕ ವ್ಯವಸ್ಥೆ ಯನ್ನು ಮುಂದಕ್ಕೊಯ್ಯುವಲ್ಲಿ ಪ್ರಧಾನ ಪಾತ್ರ ವಹಿಸುತ್ತಿದೆ. ಆದರೆ ದೇಶವನ್ನಾಳುವ ನರೇಂದ್ರ ಮೋದಿ ಸರಕಾರವು ಕಾರ್ಮಿಕ ವರ್ಗವನ್ನು ನಗಣ್ಯ ಮಾಡಿ ಇಡೀ ಆರ್ಥಿಕ ವ್ಯವಸ್ಥೆಯನ್ನು ದೇಶದ ಕಾರ್ಪೊರೇಟ್ ಕಂಪೆನಿಗಳಿಗೆ ಧಾರೆ ಎರೆದು ದೇಶದ ಸಾರ್ವಜನಿಕ ಸಂಸ್ಥೆಗಳನ್ನು ಮಾರಾಟ ಮಾಡುವ ಮೂಲಕ ಕಾರ್ಮಿಕ ವರ್ಗವನ್ನೇ ಇನ್ನಿಲ್ಲವಾಗಿಸಲು ವ್ಯವಸ್ಥಿತ ಹುನ್ನಾರ ನಡೆಸುತ್ತಿದೆ ಎಂದು ಸಿಐಟಿಯು ಕರ್ನಾಟಕ ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮಿ ಹೇಳಿದರು.
ನಗರದ ಬೋಳಾರದಲ್ಲಿರುವ ಕಾಂ.ಬಿ.ಮಾಧವ ವೇದಿಕೆ ಹಾಗೂ ಕಾಂ.ಗಿರಿಯಪ್ಪ ಉಳ್ಳಾಲ ಸಭಾಂಗಣದಲ್ಲಿ ರವಿವಾರ ಜರಗಿದ ಸಿಐಟಿಯು ೧೭ನೇ ದ.ಕ.ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಕಾರ್ಮಿಕ ವರ್ಗವನ್ನು ಪ್ರತಿನಿಧಿಸುವ ಕೇಂದ್ರ ಕಾರ್ಮಿಕ ಸಂಘಟನೆಗಳನ್ನು ಕೈಬಿಟ್ಟು ಭಾರತೀಯ ಕಾರ್ಮಿಕ ಸಮ್ಮೇಳನವನ್ನು ನಡೆಸುವ ಮೂಲಕ ನರೇಂದ್ರ ಮೋದಿ ಸರಕಾರದ ನಿಜವಾದ ಗುಣಲಕ್ಷಣಗಳು ಬಹಿರಂಗಗೊಂಡಿದೆ. ಮಾತೆತ್ತಿದರೆ ಅಭಿವೃದ್ಧಿಯ ಮಂತ್ರ ಜಪಿಸುವ ಕೇಂದ್ರ ಸರಕಾರಕ್ಕೆ ಕಾರ್ಮಿಕ ವರ್ಗವಿಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ ಎಂಬ ಸತ್ಯಾಂಶ ತಿಳಿಯಬೇಕಾಗಿದೆ. ಹೆಜ್ಜೆಹೆಜ್ಜೆಗೂ ಕಾರ್ಮಿಕರ ಬದುಕಿಗೆ ಮಾರಕ ಹೊಡೆತ ನೀಡುವ ಕೇಂದ್ರ ಸರಕಾರ ತನ್ನ ಆರ್ಥಿಕ ನೀತಿಗಳನ್ನು ಕೂಡಲೇ ಬದಲಿಸಬೇಕು. ಇಲ್ಲದಿದ್ದರೆ ಸರಕಾರವನ್ನೇ ಬದಲಿಸಲು ಕಾರ್ಮಿಕ ವರ್ಗ ಸನ್ನದ್ದವಾಗಬೇಕಾಗಿದೆ ಎಂದು ಎಸ್. ವರಲಕ್ಷ್ಮಿ ಕರೆ ನೀಡಿದರು.
ಸಿಐಟಿಯು ದ.ಕ.ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಧ್ವಜಾರೋಹಣಗೈದು ಮಾತನಾಡಿದರು. ರೈತ ಚಳುವಳಿಯ ನಾಯಕ ಕೆ.ಯಾದವ ಶೆಟ್ಟಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ, ಪದ್ಮಾವತಿ ಶೆಟ್ಟಿ, ಕಾರ್ಮಿಕ ಚಳುವಳಿಯ ಹಿರಿಯ ನಾಯಕ ಯು.ಬಿ. ಲೋಕಯ್ಯ ಉಪಸ್ಥಿತರಿದ್ದರು. ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.
ಅಗಲಿದ ಸಂಗಾತಿಗಳಿಗೆ ಶ್ರದ್ಧಾಂಜಲಿ ಅರ್ಪಿಸುವ ನಿರ್ಣಯವನ್ನು ಸಿಐಟಿಯು ಜಿಲ್ಲಾ ನಾಯಕ ಯೋಗೀಶ್ ಜಪ್ಪಿನಮೊಗರು ಮಂಡಿಸಿದರು.
ಬಳಿಕ ಜರುಗಿದ ಪ್ರತಿನಿಧಿ ಅಧಿವೇಶನದಲ್ಲಿ ಜಿಲ್ಲೆಯ ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿ ಮುಂಬರುವ ದಿನಗಳಲ್ಲಿ ಬಲಿಷ್ಠವಾದ ಕಾರ್ಮಿಕ ಚಳುವಳಿಯನ್ನು ಕಟ್ಟಲು ಸಮ್ಮೇಳನವು ಪಣ ತೊಟ್ಟಿತು.