ನೆಲ್ಯಾಡಿ: ಯುವಕ ಆತ್ಮಹತ್ಯೆ

ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಮೊರಂಕಲ ನಿವಾಸಿ ಶೆಬಿನ್ (25) ಎಂಬವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇವರು ನೆಲ್ಯಾಡಿಯಲ್ಲಿ ಪ್ರೊಫೆಸನಲ್ ಕೊರಿಯರ್ ನಡೆಸುತ್ತಿದ್ದರು. ತಾಯಿ ಹಾಗೂ ಸಹೋದರ ಅ.8ರಂದು ಸಂಜೆ ಸಂಬಂಧಿಕರ ಮನೆಗೆ ಹೋಗಿದ್ದು, ಮನೆಯಲ್ಲಿ ಶೆಬಿನ್ ಒಬ್ಬರೇ ಇದ್ದರು. ಇಂದು ಬೆಳಗ್ಗೆ ಶೆಬಿನ್‌ರವರ ಮೊಬೈಲ್‌ಗೆ ತಾಯಿ ಕರೆ ಮಾಡಿದರೂ ಸ್ವೀಕರಿಸುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಪಕ್ಕದ ಮನೆಯವರಿಗೆ ಮಾಹಿತಿ ನೀಡಿದ್ದು ಅವರು ಮನೆಗೆ ಹೋಗಿ ನೋಡುವ ವೇಳೆ ಶೆಬಿನ್ ಕೋಣೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತಿಳಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ನೆಲ್ಯಾಡಿ ಗ್ರಾ.ಪಂ.ಸದಸ್ಯ ಮಹಮ್ಮದ್ ಇಕ್ಬಾಲ್ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಾಜೇಶ್, ನೆಲ್ಯಾಡಿ ಹೊರಠಾಣೆಯ ಹೆಡ್ ಕಾನ್‌ಸ್ಟೇಬಲ್ ಬಾಲಕೃಷ್ಣ ಹಾಗೂ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
5 ತಿಂಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 75ರ ಗೋಳಿತ್ತೊಟ್ಟು ಸಮೀಪದ ಸಣ್ಣಂಪಾಡಿಯಲ್ಲಿ ಲಾರಿ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್‌ನಲ್ಲಿ ಸಹಸವಾರರಾಗಿದ್ದ ಶೆಬಿನ್ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ ಮತ್ತೆ ಕೊರಿಯರ್ ಕೆಲಸದಲ್ಲಿ ತೊಡಗಿಕೊಂಡಿದ್ದರು. ಈ ಅಪಘಾತದಲ್ಲಿ ಬೈಕ್ ಸವಾರ ಇಚ್ಲಂಪಾಡಿ ನಿವಾಸಿ ಮೃತಪಟ್ಟಿದ್ದರು.