ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಇಬ್ಬರು ಸಹೋದರರ ನಡುವಿನ ಸ್ಪರ್ಧೆಯಷ್ಟೇ: ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ ಖರ್ಗೆ (Photo:PTI)
ಶ್ರೀನಗರ, ಅ. 9: ಕಾಂಗ್ರೆಸ್ನ ಅಧ್ಯಕ್ಷ ಸ್ಥಾನಕ್ಕೆ ಶಶಿ ತರೂರ್ (Shashi Tharoor) ಅವರೊಂದಿಗೆ ಸ್ಪರ್ಧೆ ದೇಶ ಹಾಗೂ ಪಕ್ಷದ ಒಳಿತಿಗಾಗಿ ತನ್ನ ದೃಷ್ಟಿಕೋನವನ್ನು ಮುಂದಿಡುವ ಗುರಿ ಹೊಂದಿದೆ ಎಂದು ಕಾಂಗ್ರೆಸ್ (congress) ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ರವಿವಾರ ಹೇಳಿದ್ದಾರೆ.
ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಪ್ರತಿನಿಧಿಗಳೊಂದಿಗೆ ನಡೆಸಿದ ಸಂವಾದದ ಸಂದರ್ಭ ಖರ್ಗೆ ಅವರು ಈ ವಿಚಾರ ತಿಳಿಸಿದರು. ಅಲ್ಲದೆ, ಎಐಸಿಸಿ ಅಧ್ಯಕ್ಷೀಯ ಚುನಾವಣೆಯಲ್ಲಿ ತನಗೆ ಬೆಂಬಲ ನೀಡುವಂತೆ ಕೋರಿದರು.
‘‘ಇದು ಆಂತರಿಕ ಚುನಾವಣೆ. ಇದು ಮನೆಯಲ್ಲಿ ಇಬ್ಬರು ಸಹೋದರರು ಜಗಳವಾಡುವ; ಆದರೆ, ತಮ್ಮ ದೃಷ್ಟಿಕೋನವನ್ನು ಮುಂದಿಡುವ ಹಾಗೂ ಪರಸ್ಪರ ಮನವೊಲಿಸಲು ಪ್ರಯತ್ನಿಸುತ್ತಿರುವಂತೆ’’ ಎಂದು ಅವರು ಹೇಳಿದರು. ಚುನಾವಣಾ ಪ್ರಚಾರ ನಿರ್ದಿಷ್ಟ ಅಭ್ಯರ್ಥಿ ಪಕ್ಷದ ಅಧ್ಯಕ್ಷರಾದರೆ ಏನು ಮಾಡುತ್ತಾರೆ ಎಂಬುದರ ಬಗ್ಗೆ ಅಲ್ಲ, ಬದಲಾಗಿ ಅವರು ಸಂಘಟಿತರಾಗಿ ಏನು ಮಾಡಬಹುದು ಎಂಬುದರ ಬಗ್ಗೆ ಎಂದು ಖರ್ಗೆ ಹೇಳಿದರು.
‘‘ನಾನು ಏನು ಮಾಡಬಹುದು ಎಂಬುದು ಪ್ರಶ್ನೆಯಲ್ಲ. ದೇಶಕ್ಕಾಗಿ, ಪಕ್ಷಕ್ಕಾಗಿ ನಾವಿಬ್ಬರು ಸಂಘಟಿತರಾಗಿ ಏನು ಮಾಡಬಹುದು ಎಂಬುದು ಪ್ರಶ್ನೆ’’ ಎಂದು ಅವರು ತಿಳಿಸಿದರು.
‘‘ನಾನು ಇದನ್ನು ಮಾಡುತ್ತಾನೆ ಅಥವಾ ಅದನ್ನು ಮಾಡುತ್ತೇನೆ ಎಂಬ ಬಗ್ಗೆ, ಇತರರ ಬಗ್ಗೆ ಮಾತನಾಡುವುದು ಬೇಡ. ನಾನು ಮತ್ತು ನೀವು (ಪಕ್ಷದ ಕಾರ್ಯಕರ್ತರು) ಸಂಘಟಿತರಾಗಿ ಪಕ್ಷವನ್ನು ಹೇಗೆ ಬಲಪಡಿಸಬಹುದು, ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ಹೇಗೆ ರಕ್ಷಿಸಬಹುದು ಎಂಬ ಬಗ್ಗೆ ಮಾತನಾಡಬೇಕು’’ ಎಂದು ಖರ್ಗೆ ಹೇಳಿದ್ದಾರೆ.
‘‘ಇಂದು ದೇಶದ ವಾತಾವರಣ ಹದಗೆಡುತ್ತಿದೆ. ನಾವು ಅದನ್ನು ಶಾಂತಿ ಹಾಗೂ ಏಕತೆಯಿಂದ ಬಲಪಡಿಸಬೇಕು. ಅದಕ್ಕಾಗಿ ಭಾರತ್ ಜೋಡೊ ಯಾತ್ರಾ (bharat jodo yatra) ನಡೆಸಲಾಗುತ್ತಿದೆ’’ ಎಂದು ಖರ್ಗೆ ಹೇಳಿದರು.







