ಅ.11ರಿಂದ ಸಿಎಂ, ಬಿಎಸ್ವೈ ರಾಜ್ಯ ಪ್ರವಾಸ: ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್
ಬೆಂಗಳೂರು: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಅ.11ರಿಂದ ರಾಜ್ಯದಲ್ಲಿ ಪ್ರವಾಸ ಆರಂಭವಾಗಲಿದ್ದು, ನಾನು ಈಗಾಗಲೇ ಬೆಳಗಾವಿಯಿಂದ ಪ್ರವಾಸ ಆರಂಭಿಸಿದ್ದು, ಅರುಣ್ ಸಿಂಗ್ ಬೀದರ್ ನಿಂದ ಪ್ರವಾಸ ಆರಂಭಿಸಲಿದ್ದಾರೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ರವಿವಾರ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಪಕ್ಷ ಸಂಘಟನೆ ದೃಷ್ಟಿಯಿಂದ ಹಮ್ಮಿಕೊಂಡಿರುವ ಯಾತ್ರೆ ಮೊದಲ ಹಂತದಲ್ಲಿ 100 ಕ್ಷೇತ್ರಗಳ ಪ್ರವಾಸ ಕೈಗೊಳ್ಳಲಿದ್ದು, ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳಿಸಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಗುರಿ ಹೊಂದಿದ್ದೇವೆ. ಇದರಲ್ಲಿ ನಾವು ನೂರಕ್ಕೆ ನೂರು ಯಶಸ್ವಿಯಾಗಲಿದ್ದೇವೆ' ಎಂದು ಭರವಸೆ ವ್ಯಕ್ತಪಡಿಸಿದರು.
‘ಕೊಡಗು, ಕರಾವಳಿ ಭಾಗಕ್ಕೆ ಕಾಂಗ್ರೆಸ್ನಾಯಕ ರಾಹುಲ್ ಗಾಂಧಿ ಅವರನ್ನು ಯಾತ್ರೆಗೆ ಕರೆದೊಯ್ದಿದ್ದರೆ ಟಿಪ್ಪುವಿನ ಮತಾಂಧತೆ, ಆತನ ಸಮಾಜಘಾತಕ ಕೃತ್ಯದ ಪರಿಚಯ ಆಗುತ್ತಿತ್ತು. ಅದಕ್ಕಾಗಿಯೇ ಆ ಭಾಗಕ್ಕೆ ಕರೆದೊಯ್ಯದೆ ಬೇರೆ ಕಡೆ ಕರೆದೊಯ್ಯಲಾಗಿದೆ' ಎಂದು ಅವರು ಟೀಕಿಸಿದರು.
‘ಟಿಪ್ಪು ಎಕ್ಸ್ ಪ್ರೆಸ್ ರೈಲಿನ ಹೆಸರನ್ನು ಬದಲಾವಣೆ ಮಾಡಿದ್ದಕ್ಕೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೀಗ ನಮ್ಮ ಸರಕಾರ ಒಳ್ಳೆಯ ಕೆಲಸ ಮಾಡಿದೆ. ಬೆಂಗಳೂರು-ಮೈಸೂರು ನಡುವಿನ ರೈಲಿಗೆ ಟಿಪ್ಪು ಎಕ್ಸ್ ಪ್ರೆಸ್ ಹೆಸರು ತೆಗೆದು ಒಡೆಯರ್ ಹೆಸರಿಟ್ಟಿದೆ. ಹೊಸ ಯೋಜನೆ ಕಲ್ಪನೆ ಹಾಕಿಕೊಟ್ಟಿದ್ದ ಒಡೆಯರ್ ಹೆಸರಿಟ್ಟು ಗೌರವ ಕೊಡುವ ಕೆಲಸವನ್ನು ಮಾಡಿದೆ ಎಂದು ಅವರು ಹೇಳಿದರು.