300 ಮಿಲಿಯನ್ ವರ್ಷದ ಬಳಿಕ ಏಶ್ಯಾ ಖಂಡದ ಅಸ್ತಿತ್ವ ನಷ್ಟ: ವರದಿ

ಸಾಂದರ್ಭಿಕ ಚಿತ್ರ
ಸಿಡ್ನಿ, ಅ.9: ಮುಂದಿನ 200ರಿಂದ 300 ವರ್ಷದ ಅವಧಿಯಲ್ಲಿ ಆರ್ಕ್ಟಿಕ್ ಮಹಾಸಾಗರ ಮತ್ತು ಕೆರಿಬಿಯನ್ ಸಮುದ್ರ ಕಣ್ಮರೆಯಾಗಲಿದ್ದು ಏಶ್ಯಾ ಖಂಡ ಮತ್ತು ಅಮೆರಿಕ ಖಂಡ ಸಂಘಟಿತಗೊಂಡು ಅಮೇಶಿಯಾ ಎಂಬ ಹೊಸ ಸೂಪರ್ಖಂಡ ರೂಪುಗೊಳ್ಳಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಪೆಸಿಫಿಕ್ ಮಹಾಸಾಗರವು ನಿಧಾನವಾಗಿ, ಆದರೆ ಸ್ಥಿರವಾಗಿ ಪ್ರತೀ ವರ್ಷ ಸುಮಾರು 1 ಇಂಚಿನಷ್ಟು ಕುಗ್ಗುತ್ತಿದೆ ಎಂದು ಆಸ್ಟ್ರೇಲಿಯಾದ ಕರ್ಟಿನ್ ವಿವಿ ಮತ್ತು ಚೀನಾದ ಪೆಕಿಂಗ್ ವಿವಿಯ ಸಂಶೋಧಕರು ಹೇಳಿದ್ದಾರೆ. ಆದ್ದರಿಂದ ಸುಮಾರು 200ರಿಂದ 300 ಬಿಲಿಯನ್ ವರ್ಷದ ಅವಧಿಯಲ್ಲಿ ಭೂಪ್ರದೇಶಗಳು ಒಟ್ಟುಗೂಡುತ್ತವೆ ಮತ್ತು ಅಮೆರಿಕ-ಏಶ್ಯಾ ಖಂಡ ಸಂಘಟಿತಗೊಂಡು ಹೊಸ ಸೂಪರ್ಖಂಡ ಅಮೇಶಿಯಾ ರಚನೆಯಾಗಲಿದೆ. ಕಳೆದ 2 ಶತಕೋಟಿ ವರ್ಷಗಳಲ್ಲಿ ಪ್ರತೀ 600 ಮಿಲಿಯನ್ ವರ್ಷದಲ್ಲಿ ಭೂಮಿಯ ಖಂಡಗಳು ಸಂಘಟಿತಗೊಂಡು ಹೊಸ ಸೂಪರ್ಖಂಡವನ್ನು ರಚಿಸಿವೆ. ಇದನ್ನು ಸೂಪರ್ ಖಂಡ ಆವರ್ತ ಎಂದು ಕರೆಯಲಾಗುತ್ತದೆ. ಇದರರ್ಥ, ಈಗಿರುವ ಖಂಡಗಳೂ ಮುಂದಿನ 300 ವರ್ಷದಲ್ಲಿ ಸಂಘಟಿತಗೊಂಡು ಸೂಪರ್ಖಂಡದ ರಚನೆಯಾಗಲಿದೆ ಎಂದು ‘ನ್ಯಾಷನಲ್ ಸೈಯನ್ಸ್ ರಿವ್ಯೆ’ನಲ್ಲಿ ಪ್ರಕಟವಾದ ಲೇಖನದಲ್ಲಿ ಸಂಶೋಧನಾ ತಂಡದ ಮುಖ್ಯಸ್ಥ ಡಾ. ಚುವಾನ್ ಹುವಾಂಗ್ ಮಾಹಿತಿ ನೀಡಿದ್ದಾರೆ.
ಭೂಮಿಯ ಸೂಪರ್ಖಂಡಗಳು ಅಂತರ್ಮುಖಿ ಮತ್ತು ಬಹಿರ್ಮುಖತೆ ಎಂಬ ಎರಡು ವಿಧಾನದಲ್ಲಿ ರೂಪುಗೊಂಡಿವೆ. ಮೊದಲನೆಯದು, ಹಿಂದಿನ ವಿಘಟನೆಯ ಸಮಯದಲ್ಲಿ ರೂಪುಗೊಂಡ ಆಂತರಿಕ ಸಾಗರಗಳ ಮುಚ್ಚುವಿಕೆಯನ್ನು ಒಳಗೊಂಡಿರುತ್ತದೆ. ಎರಡನೆಯದು ಹಿಂದಿನ ಬಾಹ್ಯ ಸಾಗರದ ಮುಚ್ಚುವಿಕೆಯನ್ನು ಒಳಗೊಂಡಿರುತ್ತದೆ. ಈಗ ಸೂಪರ್ಕಂಪ್ಯೂಟರ್ ಬಳಸಿ ಭೂಮಿಯ ಟೆಕ್ಟೋನಿಕ್ ಪ್ಲೇಟ್ಗಳನ್ನು ಅಧ್ಯಯನ ನಡೆಸುವ ಮೂಲಕ, ಪೆಸಿಫಿಕ್ ಸಾಗರದ ಕುಗ್ಗುವಿಕೆ 300 ಬಿಲಿಯನ್ ವರ್ಷಕ್ಕೂ ಮೊದಲೇ ಅಮೇಶಿಯಾ ಸೂಪರ್ಖಂಡದ ಉಗಮಕ್ಕೆ ಕಾರಣವಾಗಲಿದೆ . ಆಸ್ಟ್ರೇಲಿಯಾವು ಈಗಾಗಲೇ ವರ್ಷಕ್ಕೆ ಸುಮಾರು 7 ಸೆಂಟಿಮೀಟರ್ ಪ್ರಮಾಣದಲ್ಲಿ ಏಶ್ಯಾದ ಕಡೆಗೆ ಚಲಿಸುತ್ತಿದೆ. ಯುರೇಷಿಯಾ ಮತ್ತು ಅಮೆರಿಕಗಳು ಪೆಸಿಫಿಕ್ ಮಹಾಸಾಗರದ ಕಡೆಗೆ ನಿಧಾನಗತಿಯಲ್ಲಿ ಚಲಿಸುತ್ತಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಹೊಸ ಸೂಪರ್ಖಂಡವು ಭೂಮಿಯ ಮೇಲ್ಭಾಗದಲ್ಲಿ ರೂಪುಗೊಳ್ಳುತ್ತದೆ ಮತ್ತು ಅಂತಿಮವಾಗಿ ದಕ್ಷಿಣದತ್ತ ಸಮಭಾಜಕ ವೃತ್ತದ ಕಡೆಗೆ ಕುಸಿಯುತ್ತದೆ. ಇದು ಸಂಭವಿಸಿದಲ್ಲಿ ಅಂಟಾರ್ಕ್ಟಿಕಾವು ಪ್ರಪಂಚದ ಕೆಳಗೆ ಪ್ರತ್ಯೇಕವಾಗಿ ಉಳಿಯಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.







