ಮಲೇಶ್ಯಾ ಸಂಸತ್ತು ವಿಸರ್ಜನೆ: ಪ್ರಧಾನಿ ಇಸ್ಮಾಯಿಲ್ ಸಾಬ್ರಿ ಘೋಷಿಣೆ

ಕೌಲಲಾಂಪುರ, ಅ.10: ಮಲೇಶ್ಯಾದ ಸಂಸತ್ತನ್ನು(Parliament of Malaysia) ವಿಸರ್ಜಿಸುವುದಾಗಿ ಅಲ್ಲಿನ ಪ್ರಧಾನಿ ಇಸ್ಮಾಯಿಲ್ ಸಾಬ್ರಿ ಯಾಕೂಬ್ (Prime Minister Ismail Sabri Yakub) ಘೋಷಿಸಿದ್ದು ಇದರೊಂದಿಗೆ ದೇಶದಲ್ಲಿ ಅವಧಿಪೂರ್ವ ಸಾರ್ವತ್ರಿಕ ಚುನಾವಣೆಗೆ ಹಾದಿ ಮಾಡಿಕೊಟ್ಟಂತಾಗಿದೆ.
ದೇಶದಲ್ಲಿ ನವೆಂಬರ್ ಮೊದಲ ವಾರದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಮಿತ್ರಪಕ್ಷಗಳೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಆಡಳಿತಾರೂಡ ಮೈತ್ರಿಸರಕಾರದ ಅತೀ ದೊಡ್ಡ ಪಕ್ಷ ಯುನೈಟೆಡ್ ಮಲಯಾಸ್ ನ್ಯಾಷನಲ್ ಆರ್ಗನೈಸೇಷನ್(ಯುಎಂಎನ್‍ಒ) ಅವಧಿಪೂರ್ವ ಸಾರ್ವತ್ರಿಕ ಚುನಾವಣೆಗೆ ಆಗ್ರಹಿಸುತ್ತಿದೆ.
ರವಿವಾರ ದೊರೆ ಸುಲ್ತಾನ್ ಅಬ್ದುಲ್ಲಾ ಸುಲ್ತಾನ್ ಅಹ್ಮದ್‍ಶಾ ರನ್ನು (Ruler Sultan Abdullah Sultan Ahmad Shah) ಭೇಟಿ ಮಾಡಿ ಸಂಸತ್ ವಿಸರ್ಜನೆಯ ಪ್ರಸ್ತಾಪ ಮುಂದಿರಿಸಿದ್ದು ಅವರು ಇದಕ್ಕೆ ಸಮ್ಮತಿಸಿದ್ದಾರೆ. ಇದೀಗ ಜನಾದೇಶವನ್ನು ಜನರಿಗೇ ಹಿಂತಿರುಗಿಸಲಾಗಿದೆ. ದೇಶಕ್ಕೆ ಸ್ಥಿರ ಮತ್ತು ಸದೃಢ ಸರಕಾರವನ್ನು ರಚಿಸಲು ಜನರ ಆದೇಶವು ಶಕ್ತಿಯುತವಾಗಿದೆ ಎಂದು ಟಿವಿ ವಾಹಿನಿಯ ಮೂಲಕ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ಹೇಳಿದ್ದಾರೆ.