8 ಮಂದಿಯಲ್ಲಿ ಒಬ್ಬರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ: ವಿಶ್ವ ಆರೋಗ್ಯ ಸಂಸ್ಥೆ

Photo: Twitter\WHO
ಜಿನೆವಾ, ಅ.10: ಜನ ಕೇಂದ್ರಿತ ಮಾನಸಿಕ ಆರೋಗ್ಯ ರಕ್ಷಣೆ ಮತ್ತು ಸೇವೆಗಳ ಸಾರ್ವತ್ರಿಕ ಲಭ್ಯತೆಯ ಕುರಿತು ಇತ್ತೀಚೆಗೆ ಅಂಗೀಕರಿಸಲಾದ `ಪಾರೊ ಘೋಷಣೆಗೆ' (For ``paro declaration'') ಅನುಗುಣವಾಗಿ , ಗುಣಮಟ್ಟದ ಮಾನಸಿಕ ಆರೋಗ್ಯ ರಕ್ಷಣೆಯು ಎಲ್ಲರಿಗೂ ಲಭಿಸುವಂತೆ ಕ್ರಮ ಕೈಗೊಳ್ಳುವಂತೆ ವಲಯದ ಸದಸ್ಯ ದೇಶಗಳಿಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಾದೇಶಿಕ ನಿರ್ದೇಶಕಿ ಡಾ. ಪೂನಮ್ ಖೇತ್ರಪಾಲ್ ಸಿಂಗ್ (Dr. Poonam Khetrapal Singh) ಕರೆ ನೀಡಿದ್ದಾರೆ.
ಜಾಗತಿಕವಾಗಿ ಎಂಟು ಜನರಲ್ಲಿ ಒಬ್ಬರು ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದವರು ಹೇಳಿದ್ದಾರೆ.
ಅಕ್ಟೋಬರ್ 10ನ್ನು ವಿಶ್ವ ಮಾನಸಿಕ ಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ.
ಜಾಗತಿಕವಾಗಿ, ಕೋವಿಡ್-19 ಸಾಂಕ್ರಾಮಿಕಕ್ಕೂ ಮುನ್ನ 8 ಮಂದಿಯಲ್ಲಿ ಒಬ್ಬ ವ್ಯಕ್ತಿ ಮಾನಸಿಕ ಆರೋಗ್ಯದ ಸಮಸ್ಯೆಯಲ್ಲಿದ್ದರು. ವಿಶೇಷವಾಗಿ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಚಿಕಿತ್ಸೆಯಲ್ಲಿನ ಅಂತರ ಅಗಾಧವಾಗಿದೆ. ಆಗ್ನೇಯ ಏಶ್ಯಾ ವಲಯದಲ್ಲಿ , ಸುಮಾರು 7ರಲ್ಲಿ ಒಬ್ಬ ವ್ಯಕ್ತಿ ಮಾನಸಿಕ ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದರೆ, ಅಂಕಿ ಅಂಶ ಲಭ್ಯವಿರುವ ದೇಶಗಳಲ್ಲಿ ಚಿಕಿತ್ಸೆಯಲ್ಲಿನ ಅಂತರದ ಪ್ರಮಾಣ 70ರಿಂದ 95%ದಷ್ಟಿದೆ . ಕೋವಿಡ್-19 ಸಾಂಕ್ರಾಮಿಕ ಬಹುತೇಕ ಎಲ್ಲಾ ಆರೋಗ್ಯ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದೆ ಎಂದು ಡಾ. ಪೂನಮ್ ಹೇಳಿದ್ದಾರೆ.
2020ರಲ್ಲಿ ಜಾಗತಿಕವಾಗಿ, ಪ್ರಮುಖ ಖಿನ್ನತೆಯ ಅಸ್ವಸ್ಥತೆ 27%ಕ್ಕೂ ಅಧಿಕ ಪ್ರಮಾಣದಲ್ಲಿ ಹೆಚ್ಚಿದೆ, ಆತಂಕದ ಸಮಸ್ಯೆ 25%ಕ್ಕೂ ಅಧಿಕ ಪ್ರಮಾಣದಲ್ಲಿ ಹೆಚ್ಚಿದ್ದು ಈಗಾಗಲೇ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ 1 ಶತಕೋಟಿ ಜನರ ಪಟ್ಟಿಗೆ ಇದು ಹೆಚ್ಚುವರಿ ಸೇರ್ಪಡೆಯಾಗಿದೆ. ಹಲವು ದೇಶಗಳಲ್ಲಿ ಆರೋಗ್ಯ ಸೇವೆಯಲ್ಲಿ ಆಗಿರುವ ವ್ಯಾಪಕ ಅಡೆತಡೆ ಇದಕ್ಕೆ ಕಾರಣವಾಗಿದೆ. 2021ರ ನವೆಂಬರ್ ಮತ್ತು ಡಿಸೆಂಬರ್ ಮಧ್ಯದಲ್ಲಿ ಜಾಗತಿಕವಾಗಿ ವಿಶ್ವ ಆರೋಗ್ಯ ಸಂಸ್ಥೆಯ 33%ಕ್ಕೂ ಅಧಿಕ ಸದಸ್ಯ ದೇಶಗಳು ಮಾನಸಿಕ, ನರವೈಜ್ಞಾನಿಕ ಮತ್ತು ಭೌತಿಕ ಬಳಕೆ ಸೇವೆಯಲ್ಲಿ ಅಡೆತಡೆಯ ಬಗ್ಗೆ ವರದಿ ಮಾಡಿವೆ.
ಅಂತರವನ್ನು ಕಡಿಮೆಗೊಳಿಸಲು ಹಾಗೂ ಸಾಂಕ್ರಾಮಿಕ ಪೂರ್ವದ ಪ್ರಗತಿ ಸಾಧಿಸುವ ಪ್ರಯತ್ನವಾಗಿ ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಶ್ಯಾ ಪ್ರಾದೇಶಿಕ ಸಮಿತಿಯ 75ನೇ ಅಧಿವೇಶನದಲ್ಲಿ ವಲಯದ ದೇಶಗಳು ಜನತೆ ಕೇಂದ್ರಿತ ಆರೋಗ್ಯ ರಕ್ಷಣೆ ಮತ್ತು ಸೇವೆಯ ಸಾರ್ವತ್ರಿಕ ಲಭ್ಯತೆಯ ನಿಟ್ಟಿನಲ್ಲಿ ಪಾರೊ ಘೋಷಣೆಯ ಅನುಷ್ಟಾನಕ್ಕೆ ನಿರ್ಣಾಯಕ ಕ್ರಮ ಕೈಗೊಳ್ಳಲು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿವೆ.
ವಲಯದ ಎಲ್ಲಾ ಜನತೆಗೆ ಗುಣಮಟ್ಟದ ಮಾನಸಿಕ ಆರೋಗ್ಯ ರಕ್ಷಣೆಯನ್ನು, ಯಾವುದೇ ಆರ್ಥಿಕ ಹೊರೆಯಿಲ್ಲದೆ ಅವರು ವಾಸಿಸುತ್ತಿರುವ ಪ್ರದೇಶದ ಸನಿಹದಲ್ಲಿ ಲಭ್ಯಗೊಳಿಸುವುದು ಪಾರೊ ಘೋಷಣೆಯ ಪ್ರಮುಖ ಉದ್ದೇಶ, ಗುರಿಯಾಗಿದೆ. ಈ ಘೋಷಣೆಯು 2021ರ ಡಿಸೆಂಬರ್ನಲ್ಲಿ ಆರಂಭಿಸಲಾದ ಹೊಸ ಪ್ರಾದೇಶಿಕ ಕಾರ್ಯತಂತ್ರಕ್ಕೆ ಪೂರಕವಾಗಿ ಮಾನಸಿಕ ಆರೋಗ್ಯ ಸೇವೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರ(ಪಿಎಚ್ಸಿ)ವಾಗಿ ಸಮನ್ವಯಗೊಳಿಸುವ ಮತ್ತು ಸಂಯೋಜಿಸು ಅಗತ್ಯಕ್ಕೆ ಈ ಘೋಷಣೆ ಒತ್ತು ನೀಡಿದೆ. ಮಾನಸಿಕ ಆರೋಗ್ಯವು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಪ್ರಮುಖ ನಿರ್ಣಾಯಕ ಅಂಶವಾಗಿದೆ, ಸಾಮಾನ್ಯ ಆರೋಗ್ಯ ಮತ್ತು ಯೋಗಕ್ಷೇಮದ ಅವಿಭಾಜ್ಯ ಅಂಗವಾಗಿದೆ ಹಾಗೂ ಆರೋಗ್ಯ ಸೇವೆ ಪಡೆಯುವುದು ಮೂಲಭೂತ ಮಾನವ ಹಕ್ಕು ಎಂದು ಘೋಷಣೆ ಪರಿಗಣಿಸಿದೆ.