ಉಕ್ರೇನ್‌ಗೆ ಅನಗತ್ಯ ಪ್ರಯಾಣ ರದ್ದುಪಡಿಸಲು ಪ್ರಜೆಗಳಿಗೆ ಭಾರತ ಸಲಹೆ

ಹೊಸದಿಲ್ಲಿ: ಉಕ್ರೇನ್‌ಗೆ ಹಾಗೂ ಉಕ್ರೇನ್‌ನಲ್ಲಿ ಎಲ್ಲ ಅನಗತ್ಯದ ಪ್ರಯಾಣಗಳನ್ನು ರದ್ದುಪಡಿಸುವಂತೆ ಭಾರತ ತನ್ನ ಪ್ರಜೆಗಳಿಗೆ ಸೋಮವಾರ ಸಲಹೆ ನೀಡಿದೆ.
ಸ್ಥಳೀಯಾಡಳಿತ ಜಾರಿಗೊಳಿಸಿರುವ ಸುರಕ್ಷೆ ಹಾಗೂ ಭದ್ರತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಿನಿಂದ ಅನುಸರಿಸುವಂತೆ ಅದು ವಿನಂತಿಸಿದೆ.
ಕೀವ್ ಸೇರಿದಂತೆ ಉಕ್ರೇನ್‌ನ ಹಲವು ನಗರಗಳ ಮೇಲೆ ರಶ್ಯ ದಾಳಿ ಆರಂಭಿಸಿದ ಗಂಟೆಗಳ ಬಳಿಕ ಭಾರತ ಈ ಸಲಹೆ ನೀಡಿದೆ. ಮೂಲಭೂತ ಸೌಕರ್ಯಗಳನ್ನು ಗುರಿಯಾಗಿರಿಸುವುದು ಹಾಗೂ ನಾಗರಿಕರ ಹತ್ಯೆ ಸೇರಿದಂತೆ ಉಕ್ರೇನ್‌ನಲ್ಲಿ ಸಂಘರ್ಷ ಉಲ್ಬಣಿಸಿರುವ ಬಗ್ಗೆ ಭಾರತ ತೀವ್ರ ಕಳವಳಗೊಂಡಿದೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್ ಬಾಗ್ಚಿ ಸೋಮವಾರ ಹೇಳಿದ್ದಾರೆ.
ಉಕ್ರೇನ್-ರಶ್ಯದ ನಡುವೆ ನಡೆಯುತ್ತಿರುವ ಯುದ್ಧದ ಕುರಿತ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಾಗ್ಚಿ, ಸಂಘರ್ಷವನ್ನು ಶಮನಗೊಳಿಸುವಂತೆ, ಕೂಡಲೇ ರಾಜತಾಂತ್ರಿಕ ಹಾಗೂ ಮಾತುಕತೆಯ ಹಾದಿಗೆ ಮರಳುವಂತೆ ಭಾರತ ಆಗ್ರಹಿಸಿದೆ ಎಂದು ಹೇಳಿದರು. ಸಂಘರ್ಷ ಯಾರೊಬ್ಬರ ಆಶಕ್ತಿಯೂ ಅಲ್ಲ. ಸಂಘರ್ಷದ ಉಲ್ಬಣವನ್ನು ಶಮನಗೊಳಿಸುವ ಎಲ್ಲ ಪ್ರಯತ್ನಗಳಿಗೆ ಬೆಂಬಲಿಸಲು ಭಾರತ ಸಿದ್ಧವಾಗಿದೆ ಎಂದು ಬಾಗ್ಚಿ ಹೇಳಿದರು.