ಇರಾನ್: ಕುರ್ದಿಸ್ತಾನ್ ಪ್ರಾಂತದಲ್ಲಿ ಮುಂದುವರಿದ ಪ್ರತಿಭಟನೆ

ಟೆಹ್ರಾನ್, ಅ.10: ಇರಾನ್‌ನಲ್ಲಿ(Iran) ಮಹ್ಸಾ ಅಮಿನಿ(Mahsa Amini) ಎಂಬ ಯುವತಿ ಕಸ್ಟಡಿಯಲ್ಲಿ ಮೃತಪಟ್ಟ(died) ಬಳಿಕ ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನೆ (protest)ಮುಂದುವರಿದಿದ್ದು ಪಶ್ಚಿಮ ಇರಾನ್‌ನ ಕುರ್ದಿಸ್ತಾನದಲ್ಲಿ ಸೋಮವಾರ ನಿರಂತರ ಗುಂಡಿನ ದಾಳಿ, ಸ್ಫೋಟದ ಸದ್ದು ಕೇಳಿ ಬಂದಿರುವುದಾಗಿ ವರದಿಯಾಗಿದೆ.
ಮಹ್ಸಾ ಅಮಿನಿ ಕುರ್ಡಿಷ್ ಸಮುದಾಯದವರಾಗಿದ್ದು, ಅವರ ಸಾವಿನ ಬಳಿಕ ಇರಾನ್‌ನ ಕುರ್ಡಿಷ್ ವಲಯದಲ್ಲಿ ಸೆಪ್ಟಂಬರ್ 17ರಿಂದಲೂ ನಿರಂತರ ಪ್ರತಿಭಟನೆ, ಹಿಂಸಾಚಾರ ಮುಂದುವರಿದಿದೆ. ಕುರ್ದಿಸ್ತಾನ ಪ್ರಾಂತದ ರಾಜಧಾನಿ ಸನಾಂದಜ್‌ನಲ್ಲಿ ಹಾಗೂ ಇರಾಕ್ ಗಡಿಭಾಗದ ಸಲಾಸ್ ಬಾಬಾಜಾನಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಘರ್ಷಣೆ , ಹಿಂಸಾಚಾರ ಭುಗಿಲೆದ್ದಿದೆ ಎಂದು ಹೆಂಗಾವ್ ಮಾನವಹಕ್ಕುಗಳ ಸಂಘಟನೆ ವರದಿ ಮಾಡಿದೆ. ಸಮೀಪದ ಗ್ರಾಮದಲ್ಲಿ ಕನಿಷ್ಟ ಒಬ್ಬ ವ್ಯಕ್ತಿ ಭದ್ರತಾ ಪಡೆಯ ಗುಂಡೇಟಿನಿಂದ ಮೃತಪಟ್ಟಿರುವುದಾಗಿ ಮಾನವ ಹಕ್ಕು ಕಾರ್ಯಕರ್ತರು ಹೇಳಿದ್ದಾರೆ.
ಇರಾನ್ ಆಡಳಿತ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಿದ್ದರೂ, ಮಹಿಳಾ ಪ್ರತಿಭಟನಾಕಾರರನ್ನು ಭದ್ರತಾ ಪಡೆ ಥಳಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.