ಮೀಸಲಾತಿ ಪ್ರಮಾಣ ಹೆಚ್ಚಳ ಬಿಜೆಪಿಯ ರಾಜಕೀಯ ನಾಟಕ: ಪ್ರಿಯಾಂಕ್ ಖರ್ಗೆ ಟೀಕೆ
ಚಿತ್ರದುರ್ಗ, ಅ. 10: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೀಸಲಾತಿ ಹೆಚ್ಚಳದ ಮೂಲಕ ಬಿಜೆಪಿ ಮುಂದಿನ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ನಾಟಕ ಆಡುತ್ತಿದೆ. ಬಿಜೆಪಿ ಅಧಿಕಾರಿಕ್ಕೆ ಬಂದ ಇಷ್ಟು ವರ್ಷಗಳ ಕಾಲ ಸುಮ್ಮೆನೆ ಇದ್ದದ್ದು ಏಕೆ?' ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಹಾಗೂ ಚಿತ್ತಾಪುರ ಕ್ಷೇತ್ರದ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಸೋಮವಾರ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯವರು ಮೀಸಲಾತಿ ಪ್ರಮಾಣ ಹೆಚ್ಚಳ ಕೆಲಸಕ್ಕೆ ಮುಂದಾಗಿದೆ ಅಷ್ಟೇ. ಅಲ್ಲದೆ ಇವರು ಕಳಿಸಿದ ಕಡತಗಳು ಕೇಂದ್ರ ಸರಕಾರದಲ್ಲಿ ದೂಳು ತಿನ್ನುತ್ತದೆ. ಇಷ್ಟು ವರ್ಷಗಳ ಕಾಲ ಬಿಜೆಪಿ ಏಕೆ ಮೀಸಲಾತಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಿಲ್ಲ? ಎಂದು ಕೇಳಿದರು.
‘ಬಿಜೆಪಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ವಿರೋಧಿಯಾಗಿದ್ದು, ಆರೆಸೆಸ್ಸ್ ಸಿದ್ಧಾಂತವನ್ನು ಒಪ್ಪದವರನ್ನು ಬಿಜೆಪಿ ವಿರೋಧಿಸುತ್ತದೆ.ಬ್ರಿಟಿಷರಂತೆ ಕಾಂಗ್ರೆಸ್ಸಿಗರನ್ನು ಜನ ಓಡಿಸುತ್ತಾರೆಂಬ ಸಚಿವ ಸುಧಾಕರ್ ಹೇಳಿಕೆಗೆ ಅಧಿಕಾರದ ಮದ ತಲೆಗೇರಿದ್ದು, ಹೀಗಾಗಿ ಅವರು ಮನಸೋ ಇಚ್ಛೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರಿಗೆ ಜನತೆ ಮುಂಬರುವ ದಿನಗಳಲ್ಲಿ ಪಾಠ ಕಲಿಸಲಿದ್ದಾರೆ' ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
‘ಕಾಂಗ್ರೆಸ್ ವಿರುದ್ಧ ಮಾತನಾಡುವ ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಎರಡು ಭಾರಿ ಯಾವ ಸಿದ್ಧಾಂತ ಒಪ್ಪಿ ಶಾಸಕ ಆಗಿದ್ದರು? ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಇದೀಗ ಬಿಜೆಪಿ ಸೇರುತ್ತಿದ್ದಂತೆ ಕಾಂಗ್ರೆಸ್ ಸಿದ್ಧಾಂತದ ಬಗ್ಗೆ ಟೀಕಿಸುತ್ತಾರೆ. ಕಾಂಗ್ರೆಸ್ ಮುಕ್ತ ಭಾರತ ಎಂಬುದು ಅಸಾಧ್ಯ. ಶೇ.40ರಷ್ಟುಕಮಿಷನ್ ಭ್ರಷ್ಟಾಚಾರದ ಸರಕಾರವನ್ನು ಜನ ಕಂಡಿದ್ದಾರೆ. ಬಿಜೆಪಿ ಮುಕ್ತ ಕರ್ನಾಟಕದ ಕಾಲ ಸಮೀಪಿಸುತ್ತಿದೆ' ಎಂದು ಅವರು ನುಡಿದರು.