ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ; ಕನಿಷ್ಠ 10 ಮಂದಿ ಮೃತ್ಯು
(ಫೋಟೊ AFP)
ಕೀವ್: ಸೇತುವೆ ಸ್ಫೋಟಕ್ಕೆ ಪ್ರತೀಕಾರವಾಗಿ ರಷ್ಯಾ ಸೋಮವಾರ ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ಮಾಡಿದ್ದು, ದೇಶಾದ್ಯಂತ ನಡೆಸಿದ 84 ಕ್ಷಿಪಣಿ ದಾಳಿಗಳಲ್ಲಿ ಕನಿಷ್ಠ 10 ಮಂದಿ ಮೃತಪಟ್ಟು ಹತ್ತಾರು ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಹೇಳಿದೆ.
ಜೂನ್ ಬಳಿಕ ಇದೇ ಮೊದಲ ಬಾರಿಗೆ ಉಕ್ರೇನ್ನ ರಾಜಧಾನಿ ಕೀವ್ನ ಮೇಲೆ ಕೂಡಾ ಸೋಮವಾರ ಕ್ಷಿಪಣಿ ದಾಳಿ ನಡೆದಿದೆ.
ಉಕ್ರೇನ್ ಪ್ರಧಾನಿ ಡೆನಿಸ್ ಶ್ಮಿಗಲ್ ಅವರ ಪ್ರಕಾರ ಉಕ್ರೇನ್ನ ಎಂಟು ಪ್ರಾಂತ್ಯಗಳು ಮತ್ತು ಕೀವ್ನ ಮೇಲೆ ನಡೆದ ದಾಳಿಯಲ್ಲಿ 11 ಪ್ರಮುಖ ಮೂಲಸೌಕರ್ಯ ವ್ಯವಸ್ಥೆಗಳಿಗೆ ಹಾನಿಯಾಗಿದೆ. ತಾತ್ಕಾಲಿಕವಾಗಿ ವಿದ್ಯುತ್, ನೀರು ಹಾಗೂ ಸಂಪರ್ಕ ವ್ಯವಸ್ಥೆ ಕಡಿತಕ್ಕೆ ಜನ ಸಿದ್ಧರಾಗಬೇಕು ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಜನತೆಗೆ ಕರೆ ನೀಡಿದ್ದಾರೆ.
ರಷ್ಯಾ ಮತ್ತು ಕ್ರಿಮಿಯಾವನ್ನು ಸಂಪರ್ಕಿಸುವ ಸೇತುವೆ ಸ್ಫೋಟಗೊಂಡ ಎರಡೇ ದಿನದಲ್ಲಿ ರಷ್ಯಾ ಈ ಪ್ರತೀಕಾರದ ದಾಳಿ ನಡೆಸಿದ್ದು, ಕ್ರಿಮಿಯಾ ಸೇತುವೆ ಸ್ಫೋಟಕ್ಕೆ ಕೀವ್ ಹೊಣೆ ಎಂದು ಆಪಾದಿಸಿದೆ. ಯುದ್ಧರಂಗದಲ್ಲಿ ಸರಣಿ ಸೋಲುಗಳನ್ನು ಕಂಡು ಹತಾಶರಾಗಿರುವ ಪುಟಿನ್ ಇದೀಗ 84 ಕ್ಷಿಪಣಿ ದಾಳಿ ನಡೆಸಿದ್ದಾರೆ ಎಂದು ಉಕ್ರೇನ್ ವಿದೇಶಾಂಗ ಸಚಿವ ಡ್ಮಿಟ್ರೊ ಕುಲೇಬಾ ಹೇಳಿದ್ದಾರೆ.
ಇದು ಕೇವಲ ಮೊದಲ ಕಂತು. ಇನ್ನಷ್ಟು ಕಂತುಗಳಲ್ಲೂ ದಾಳಿ ನಡೆಯಬಹುದು ಎಂದು ರಷ್ಯಾದ ಮಾಜಿ ಅಧ್ಯಕ್ಷ ಡ್ಮಿಟ್ರಿ ಮೆಡ್ವೆಡೇವ್ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ndtv.com ವರದಿ ಮಾಡಿದೆ.