ಬಿಸಿಸಿಐ ಅಧ್ಯಕ್ಷರಾಗಿ ರೋಜರ್ ಬಿನ್ನಿ ಆಯ್ಕೆ ಸಾಧ್ಯತೆ: ವರದಿ

ಸೌರವ್ ಗಂಗುಲಿ, ರೋಜರ್ ಬಿನ್ನಿ Photo: IANS/Twitter
ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ 1983 ರ ವಿಶ್ವಕಪ್ ವಿಜೇತ ತಂಡದ ಸದಸ್ಯ ರೋಜರ್ ಬಿನ್ನಿ Roger Binny ಅವರು ಸೌರವ್ ಗಂಗುಲಿ ಅವರ ಸ್ಥಾನಕ್ಕೆ ಮುಂದಿನ ಬಿಸಿಸಿಐ BCCI ಅಧ್ಯಕ್ಷರಾಗುವ ಸಾಧ್ಯತೆಯಿದೆ ಎಂದು ಮೂಲಗಳು NDTV ಗೆ ತಿಳಿಸಿವೆ.
ಬಿನ್ನಿ ಪ್ರಸಕ್ತ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ (KSCA) ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಈ ಹಿಂದೆ ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 2019 ರ ಅಕ್ಟೋಬರ್ನಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾದ ಗಂಗುಲಿ ಅವರ ಹೆಸರನ್ನು ಮುಂದಿನ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಅಧ್ಯಕ್ಷರನ್ನಾಗಿಸುವ ವಿಚಾರ ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಅಕ್ಟೋಬರ್ 18 ರಂದು ಮುಂಬೈನಲ್ಲಿ ಬಿಸಿಸಿಐ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 11 ಹಾಗೂ 12 ರಂದು ನಾಮಪತ್ರಗಳನ್ನು ಭರ್ತಿ ಮಾಡಬಹುದು. ನಾಮಪತ್ರಗಳ ಪರಿಶೀಲನೆ ಅಕ್ಟೋಬರ್ 13 ರಂದು ನಡೆಯಲಿದೆ. ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಅಕ್ಟೋಬರ್ 14 ರೊಳಗೆ ಹಿಂಪಡೆಯಬಹುದು.
ಮೂಲಗಳ ಪ್ರಕಾರ, ಜಯ್ ಶಾ Jay Shah ಬಿಸಿಸಿಐ ಕಾರ್ಯದರ್ಶಿಯಾಗಿ ಮುಂದುವರಿಯುವ ಸಾಧ್ಯತೆಯಿದೆ ಹಾಗೂ ಅವರು ಐಸಿಸಿಯಲ್ಲಿ ಭಾರತವನ್ನು ಪ್ರತಿನಿಧಿಸಬಹುದು. ರಾಜೀವ್ ಶುಕ್ಲಾ ಅವರು ಮುಂದಿನ ಬಿಸಿಸಿಐ ಉಪಾಧ್ಯಕ್ಷರಾಗಲು ಮುಂಚೂಣಿಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.







