ಜೈಲಿನಲ್ಲಿದ್ದ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಅಲ್ತಾಫ್ ಷಾ ದಿಲ್ಲಿಯಲ್ಲಿ ನಿಧನ

ಅಲ್ತಾಫ್ ಷಾ (Photo credit: indiatoday.in)
ಹೊಸದಿಲ್ಲಿ: ಜೈಲಿನಲ್ಲಿರುವ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಹಾಗೂ ದಿವಂಗತ ಹುರಿಯತ್ ನಾಯಕ ಸೈಯದ್ ಅಲಿ ಶಾ ಗಿಲಾನಿ ಅವರ ಅಳಿಯ ಅಲ್ತಾಫ್ ಷಾ ಹೊಸದಿಲ್ಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನಲ್ಲಿ ನಿಧನರಾಗಿದ್ದಾರೆ. ಅವರನ್ನು ಕೆಲ ದಿನಗಳ ಹಿಂದೆ ಚಿಕಿತ್ಸೆಗಾಗಿ ತಿಹಾರ್ ಜೈಲಿನಿಂದ ಏಮ್ಸ್ ಗೆ ಸ್ಥಳಾಂತರಿಸಲಾಗಿತ್ತು.
ಅಲ್ತಾಫ್ ಷಾ (66 ವರ್ಷ) ಮಂಗಳವಾರ ಮುಂಜಾನೆ ಕ್ಯಾನ್ಸರ್ ನಿಂದ ನಿಧನರಾದರು. ತನ್ನ ತಂದೆ ಹೊಸದಿಲ್ಲಿಯ ಏಮ್ಸ್ ನಲ್ಲಿ "ಕೈದಿಯಾಗಿ" ಕೊನೆಯುಸಿರೆಳೆದಿದ್ದಾರೆ ಎಂದು ಅಲ್ತಾಫ್ ಪುತ್ರಿ ಟ್ವೀಟಿಸಿದ್ದಾರೆ.
ಶ್ರೀನಗರದ ಸೌರಾ ಪ್ರದೇಶದ ನಿವಾಸಿಯಾದ ಹುರಿಯತ್ ನಾಯಕನನ್ನು ಜುಲೈ 25, 2017 ರಂದು ಇತರ ಆರು ಮಂದಿಯೊಂದಿಗೆ ಬಂಧಿಸಲಾಯಿತು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆ ನಡೆಸಿದ ಉಗ್ರರಿಗೆ ಹಣ ಪೂರೈಸಿದ ಆರೋಪವಿರುವ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು.
ಮೂತ್ರಪಿಂಡದ ಕ್ಯಾನ್ಸರ್ ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಷಾ ರನ್ನು ದಿಲ್ಲಿಯ ಏಮ್ಸ್ ಗೆ ಸ್ಥಳಾಂತರಿಸುವಂತೆ ದಿಲ್ಲಿ ಹೈಕೋರ್ಟ್ ಅಕ್ಟೋಬರ್ 1 ರಂದು ಆದೇಶಿಸಿತ್ತು.
Abu breathed his last at AIIMS, New Delhi. As a prisoner. https://t.co/EqxGyappW0
— Ruwa Shah (@ShahRuwa) October 10, 2022







