ದೇರಳಕಟ್ಟೆ: ಗ್ರಾಪಂ ಅಧ್ಯಕ್ಷರ ಅಧಿಕಾರ ಮೊಟಕು ವಿರೋಧಿಸಿ ಕಾಂಗ್ರೆಸ್ ನಿಂದ ಪ್ರತಿಭಟನೆ

ಕೊಣಾಜೆ, ಅ.11: ಗ್ರಾಮೀಣ ಅಭಿವೃದ್ಧಿಗಾಗಿ ಪಂಚಾಯತ್ ಗಳಿಗೆ ನೀಡಲ್ಪಟ್ಟ ಅಧಿಕಾರವನ್ನು ಬಲಪಡಿಸಬೇಕಿದ್ದ ಬಿಜೆಪಿ ಸರ್ಕಾರ ಅಧಿಕಾರ ಮೊಟಕುಗೊಳಿಸಲು ಪ್ರಯತ್ನಿಸುತ್ತಿರುವುದು ಖಂಡನೀಯ. ಪಂಚಾಯತ್ ಗೆ ನೀಡಿದ ಅಧಿಕಾರ ಮೊಟಕುಗೊಳಿಸಿದ್ದೇ ಆದಲ್ಲಿ ಜಿಲ್ಲಾ ಮಟ್ಟದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಉಳ್ಳಾಲ ಬ್ಲಾಕ್ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಎಚ್ಚರಿಸಿದ್ದಾರೆ.
ಪಂಚಾಯತ್ ಅಧ್ಯಕ್ಷರ ಹಾಗೂ ಸದಸ್ಯರ ಅಧಿಕಾರ ಮೊಟಕುಗೊಳಿಸುವುದನ್ನು ವಿರೋಧಿಸಿ ಉಳ್ಳಾಲ ಮತ್ತು ಮುಡಿಪು ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ವತಿಯಿಂದ ದೇರಳಕಟ್ಟೆಯಲ್ಲಿಂದು ಬೆಳಗ್ಗೆ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಪಂಚಾಯತ್ ನ ಅಧಿಕಾರವನ್ನು ಕಸಿಯುತ್ತಾ ಬಂದಿರುವ ಬಿಜೆಪಿ ಸರ್ಕಾರ ಇದೀಗ ಸಂಪೂರ್ಣ ಅಧಿಕಾರ ಮೊಟಕುಗೊಳಿಸಿ ಗ್ರಾಮ ಪಂಚಾಯತ್ ಪ್ರತಿನಿಧಿಗಳನ್ನು ನಿಷ್ಕ್ರಿಯಗೊಳಿಸಲು ಮುಂದಾಗಿದೆ. ದೊಡ್ಡ ದೇಶಭಕ್ತರೆಂದು ಹೇಳಿಕೊಳ್ಳುತ್ತಿರುವ ಬಿಜೆಪಿಯವರು ರಾಷ್ಟ್ರ ಧ್ವಜದಲ್ಲೂ 40ಶೇ. ಕಮಿಷನ್ ಪಡೆಯಲು ಮುಂದಾಗಿದೆ ಎಂದು ಆರೋಪಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ.ಎಸ್.ಮುಹಮ್ಮದ್ ಮಾತನಾಡಿ, ಪಂಚಾಯತ್ ಅಧ್ಯಕ್ಷ, ಸದಸ್ಯರ ಎಲ್ಲಾ ಅಧಿಕಾರ ಕಸಿದು ಚೆಕ್ ಗೆ ಸಹಿ ಹಾಕುವ ಪಿಡಿಓಗೆ ನೀಡುವುದಾದರೆ ಇವರಿಗೆ ಭಾರತ ರತ್ನ ಪ್ರಶಸ್ತಿ ಕೊಡಲೇಬೇಕು ಎಂದು ವ್ಯಂಗ್ಯವಾಡಿದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ‌್, ಬೆಲ್ಮ ಗ್ರಾಪಂ ಅಧ್ಯಕ್ಷ ಬಿ.ಎಂ.ಸತ್ತಾರ್, ತಾಪಂ ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು, ಮುಡಾ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಟಿ.ಎಸ್.ಅಬ್ದುಲ್ಲಾ ಸಾಮಣಿಗೆ, ಬಂಟ್ವಾಳ ತಾಪಂ ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ನಾಸಿರ್ ಅಹ್ಮದ್ ಸಾಮಣಿಗೆ, ಮುಖಂಡರಾದ ಎನ್.ಎಸ್.ನಾಸಿರ್ ನಡುಪದವು, ಮುಸ್ತಫ ಮಲಾರ್, ಅಚ್ಯುತ ಗಟ್ಟಿ, ಇಕ್ಬಾಲ್ ಸಾಮಾನಿಗೆ, ಸುಭೋದ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.
ನಝರ್ ಷಾ ಪಟ್ಟೋರಿ ಸ್ವಾಗತಿಸಿದರು. ಹೈದರ್ ಕೈರಂಗಳ ಪ್ರಾಸ್ತಾವಿಕವಾಗಿ ಮಾತನಾಡಿದರು. ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.