ಮನಪಾದಿಂದ ಅಂಬೇಡ್ಕರ್ ವೃತ್ತ ನಿರ್ಮಾಣ ವಿಳಂಬ; ಸಂವಿಧಾನ ಶಿಲ್ಪಿಗೆ ಅಗೌರವ: ಆಕ್ಷೇಪ
ಮಂಗಳೂರು ಉಪ ವಿಭಾಗ ದಲಿತರ ಕುಂದುಕೊರತೆ ಸಭೆ
ಮಂಗಳೂರು, ಅ. 11: ನಗರದ ಹೃದಯ ಭಾಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ನಿರ್ಮಾಣಕ್ಕೆ 98 ಲಕ್ಷ ರೂ. ಅನುದಾನ ಮೀಸಲಾಗಿಟ್ಟಿದ್ದರೂ ಅದನ್ನು ನಿರ್ಮಿಸದೆ ಮಂಗಳೂರು ಮಹಾನಗರ ಪಾಲಿಕೆ ಸಂವಿಧಾನ ಶಿಲ್ಪಿಗೆ ಅಗೌರವ ತೋರುತ್ತಿದೆ ಎಂದು ದಲಿತ ಮುಖಂಡರಿಂದ ಆಕ್ಷೇಪ ವ್ಯಕ್ತವಾಗಿದೆ.
ಮಂಗಳೂರು ಸಹಾಯಕ ಉಪ ವಿಭಾಗಾಧಿಕಾರಿ (ಎಸಿ) ಮದನ್ ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ, ಪಂಗಡದವರ ಕುಂದು ಕೊರತೆ ಸಮಿತಿ ಸಭೆಯಲ್ಲಿ ದಲಿತ ಮುಖಂಡ ಎಸ್. ಪಿ. ಆನಂದ ವಿಷಯ ಪ್ರಸ್ತಾಪಿಸಿದರು.
ನಗರದಲ್ಲಿ ಅಷ್ಟೊಂದು ಸಂಖ್ಯೆಯಲ್ಲಿ ಕೆಲವೇ ಸಮಯದಲ್ಲಿ ವೃತ್ತಗಳು ನಿರ್ಮಾಣವಾಗುತ್ತಿದ್ದರೂ, ಹಲವು ವರ್ಷ ಗಳ ಬೇಡಿಕೆಯಾದ ಅಂಬೇಡ್ಕರ್ ವೃತ್ತ ನಿರ್ಮಾಣಕ್ಕೆ ಹಣ ಮೀಸಲಾಗಿಟ್ಟರೂ ಮನಪಾ ಕಾಮಗಾರಿ ನಡೆಸಲು ವಿಳಂಬ ತೋರುತ್ತಿದೆ ಎಂದು ಆರೋಪಿಸಿದರು.
ಎಸಿ ಮದನ್ ಮೋಹನ್ ಪ್ರತಿಕ್ರಿಯಿಸಿ ಅಂಬೇಡ್ಕರ್ ವೃತ್ತ ನಾಮಕಾರಣವಾಗಿದ್ದರೂ ಕಾಮಗಾರಿ ಆರಂಭವಾಗದ ಬಗ್ಗೆ ಸಭೆಯಲ್ಲಿ ಚರ್ಚೆಯಾದ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸುವುದಾಗಿ ಹೇಳಿದರು.
ದಲಿತರ ವಸತಿ ಪ್ರದೇಶದಲ್ಲಿ ಮದ್ಯದಂಗಡಿಗೆ ಪರವಾನಿಗೆ ನೀಡದಂತೆ ಆಗ್ರಹ
ಸುರತ್ಕಲ್ ತಡಂಬೈಲ್ ಬಳಿ ಸುಮಾರು ೪೦೦ರಷ್ಟು ದಲಿತ ಕುಟುಂಬಗಳು ವಾಸಿಸುತ್ತಿದ್ದಾರೆ. ಅಲ್ಲಿ ಈಗಾಗಲೇ ಇತರ ಅನಧಿಕೃತ ಮಾದಕ ದ್ರವ್ಯಗಳಿಂದ ಕುಟುಂಬಗಳು ತೊಂದರೆಗಳಾಗಿವೆ. ಈ ನಡುವೆ ಅಲ್ಲಿ ಮದ್ಯದಂಗಡಿ ತೆರೆಯಲು ಪರವಾನಿಗೆ ನೀಡಬಾರದು ಎಂದು ದಲಿತ ಮುಖಂಡರು ಆಗ್ರಹಿಸಿದರು.
ಮದ್ಯದಂಗಡಿ ಪರವಾನಿಗೆಗೆ ಆಕ್ಷೇಪಣೆ ಬಂದಿರುವುದಾಗಿ ಅಬಕಾರಿ ಇಲಾಖೆಗೆ ಪತ್ರ ಬರೆಯುವುದಾಗಿ ಎಸಿ ಮದನ್ ಮೋಹನ್ ಪ್ರತಿಕ್ರಿಯಿಸಿದರು.
ಡಾ. ಅಂಬೇಡ್ಕರ್, ಮಹಾತ್ಮಗಾಂಧಿ ಭಾವಚಿತ್ರ ಇಡುವ ಬಗ್ಗೆ ಸೂಚನೆ
ಕೋ ಅಪರೇಟಿವ್ ಸೊಸೈಟಿಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್, ಮಹಾತ್ಮಗಾಂಧಿ ಫೋಟೋ ಇಡುವುದಿಲ್ಲ. ಸರಕಾರದಿಂದ ಅನುದಾನ ಪಡೆಯುವ ಸಂಸ್ಥೆಗಳಲ್ಲಿ ಸಂವಿಧಾನ ಶಿಲ್ಪಿ ಹಾಗೂ ಮಹಾತ್ಮಾಗಾಂಧಿಯ ಬಗ್ಗೆ ಅಸಡ್ಡೆ ತೋರಿಸಲಾಗುತ್ತಿದೆ. ಈ ಬಗ್ಗೆ ದೂರು ನೀಡಿದರೂ ಕ್ರಮವಾಗುತ್ತಿಲ್ಲ ಎಂದು ದಲಿತ ಮುಖಂಡರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
ಸರಕಾರದ ನಿಯಮಾನುಸಾರ ಯಾವೆಲ್ಲಾ ಸರಕಾರಿ ಹಾಗೂ ಇತರ ಸಂಸ್ಥೆಗಳಲ್ಲಿ ಈ ಮಹಾತ್ಮರ ಭಾವಚಿತ್ರ ಕಡ್ಡಾಯವಾಗಿ ಅಳವಡಿಸಬೇಕೋ ಆ ನಿಯಮ ಪಾಲನೆಯಾಗಬೇಕು. ಪಾಲನೆಯಾಗದಿದ್ದಲ್ಲಿ ಕ್ರಮ ವಹಿಸಿದ ಬಗ್ಗೆ ಮುಂದಿನ ಸಭೆಗೆ ವರದಿ ನೀಡಬೇಕು ಎಂದು ಮದನ್ ಮೋಹನ್ ಸೂಚನೆ ನೀಡಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಸಾಲಕ್ಕೆ ಅರ್ಜಿ ವಿಲೇಗೆ ವಿಳಂಬ ಮಾಡಲಾಗುತ್ತಿದೆ. ವಿಧಾನಸಭಾ ಕ್ಷೇತ್ರ ವೊಂದರಲ್ಲಿ ಒಂದು ಸಾವಿರಕ್ಕೂ ಅಧಿಕ ಅರ್ಜಿ ಸಲ್ಲಿಸಲಾಗುತ್ತದೆ. ಆದರೆ ಶಾಸಕರ ಕೋಟಾದಡಿ ನಾಲ್ಕೈದು ಅರ್ಜಿಗಳನ್ನು ಮಾತ್ರವೇ ಪರಿಗಣಿಸಲಾಗುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿಯೇ ಫಲಾನುಭವಿಗಳ ಆಯ್ಕೆ ನಡೆಸಲು ಕ್ರಮ ವಹಿಸಬೇಕು ಎಂದು ದಲಿತ ಮುಖಂಡರು ಸಭೆಯಲ್ಲಿ ಆಗ್ರಹಿಸಿದರು.
ಸಭೆಯಲ್ಲಿ ಚರ್ಚೆಯಾದ ಬೇಡಿಕೆಯ ಕುರಿತಂತೆ ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಎಸಿ ಮದನ್ ಮೋಹನ್ ತಿಳಿಸಿದರು.
ಬಂಟ್ವಾಳ ತಾಲೂಕು ಕಚೇರಿಯಲ್ಲಿ ಕಡತ ಕಾಣೆ!
ಹಕ್ಕುಪತ್ರ, ಭೂ ನಕ್ಷೆಗೆ ಸಂಬಂಧಿಸಿದ ಕಡತಗಳು ಬಂಟ್ವಾಳ ತಾಲೂಕು ಕಚೇರಿಯಲ್ಲ್ ಕಾಣೆಯಾಗುತ್ತದೆ. ೨೦೧೭ರಲ್ಲಿ ಭೂ ಪರಿವರ್ತನೆಗೊಂಡು ಹಕ್ಕುಪತ್ರ ಆಗಿರುವ ಭೂ ನಕ್ಷೆಗಳಿಗೆ ಸಂಬಂಧಿಸಿ ಸುಮಾರು ೧೫ ಮಂದಿಯ ಕಡತವೇ ಕಾಣುತ್ತಿಲ್ಲ. ವಿಟ್ಲ ಕಡಬ ಕಚೇರಿಯಲ್ಲಿ ಹೊಸ ಕಡತ ಕೂಡಾ ಕಣ್ಮರೆಯಾಗಿದೆ ಎಂದು ದಲಿತ ಮುಖಂಡರೊಬ್ಬರು ಆಕ್ಷೇಪಿಸಿದರು.
ಈ ಬಗ್ಗೆ ತಹಶೀಲ್ದಾರರಿಂದ ಪರಿಶೀಲನೆ ಮಾಡಿಸಿ ಕ್ರಮ ವಹಿಸುವುದಾಗಿ ಎಸಿ ಮದನ್ ಮೋಹನ್ ತಿಳಿಸಿದರು.
ಸಭೆಯಲ್ಲಿ ಮಂಗಳೂರು, ಮುಲ್ಕಿ, ಮೂಡಬಿದ್ರೆ, ಉಳ್ಳಾಲ ವ್ಯಾಪ್ತಿಗೊಳಪಟ್ಟ ದಲಿತರ ಕುಂದುಕೊರತೆಗಳ ಬಗ್ಗೆ ಚರ್ಚೆ, ಹಿಂದಿನ ಸಭೆಯ ಪಾಲನಾ ವರದಿಯನ್ನು ಮಂಡಿಸಲಾಯಿತು.
ಸಭೆಯಲ್ಲಿ ಕೆಲವೊಂದು ಅನುಪಸ್ಥಿತರಿದ್ದ ಅಧಿಕಾರಿಗಳಿಗೆ ನೋಟೀಸು ನೀಡುವಂತೆ ಎಸಿ ಮದನ್ ಮೋಹನ್ ಸೂಚಿಸಿದರು.
ಮಂಗಳೂರು ತಹಶೀಲ್ದಾರ್ ಪುಟ್ಟರಾಜು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮನೀಶ್ ನಾಯಕ್, ಸುನೀತಾ ಕುಮಾರಿ ಮೊದಲಾದವರು ಉಪಸ್ಥಿತರಿದ್ದರು.