ಮಡಿಕೇರಿ: ಹಾಡಹಗಲೇ ಮನೆಗೆ ನುಗ್ಗಿ ಮಹಿಳೆ ಧರಿಸಿದ್ದ ಚಿನ್ನಾಭರಣ ದರೋಡೆ
ಮಡಿಕೇರಿ ಅ.11 : ಹಾಡಹಗಲೇ ಮನೆಗೆ ನುಗ್ಗಿ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಮತ್ತು 1 ಕಿವಿಯೋಲೆಯನ್ನು ಕಿತ್ತು ಪರಾರಿಯಾದ ಘಟನೆ ಮಡಿಕೇರಿ ನಗರದ ಹೃದಯ ಭಾಗದಲ್ಲಿ ನಡೆದಿದೆ.
ನಗರದ ಹಳೆಯ ಬಸ್ ನಿಲ್ದಾಣದ ಮೇಲ್ಭಾಗದ ಮನೆಯಲ್ಲಿ ಗೃಹಿಣಿ ಮಾತ್ರವೇ ಇದ್ದರು. ಮಂಗಳವಾರ ಮಧ್ಯಾಹ್ನ ಧಾರಾಕಾರ ಮಳೆ ಸುರಿಯುತ್ತಿದ್ದ ಸಂದರ್ಭವನ್ನು ಬಳಸಿಕೊಂಡ ದುಷ್ಕರ್ಮಿ ಮನೆಯ ಬಾಗಿಲು ತಳ್ಳಿ ಒಳನುಗ್ಗಿದ್ದಾನೆ. ಟವಲ್‍ನಲ್ಲಿ ಮಹಿಳೆಯ ಮುಖ ಮುಚ್ಚಿ ಕುತ್ತಿಗೆಯಲ್ಲಿದ್ದ 60 ಗ್ರಾಂ ಚಿನ್ನದ ಸರ ಮತ್ತು 1 ಕಿವಿ ಓಲೆಯನ್ನು ಕಿತ್ತೊಯ್ದಿದ್ದಾನೆ ಎಂದು ಆರೋಪಿಸಲಾಗಿದೆ.
ತಕ್ಷಣವೇ ಮಹಿಳೆ ತನ್ನ ಪತಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಮಡಿಕೇರಿ ನಗರ ಠಾಣೆಯಲ್ಲಿ ಪತಿ ದಿನೇಶ್ ರಾವ್ ದೂರು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ನಗರ ವೃತ್ತ ನಿರೀಕ್ಷಕ ಶಿವಶಂಕರ್, ಠಾಣಾಧಿಕಾರಿ ಶ್ರೀನಿವಾಸ್, ಕ್ರೈಂ ವಿಭಾಗದ ಠಾಣಾಧಿಕಾರಿ ರಾಧ, ಕ್ರೈಂ ಸಿಬ್ಬಂದಿಗಳಾದ ದಿನೇಶ್, ನಾಗರಾಜ್ ವಾಹನ ಚಾಲಕ ದೇವರಾಜು ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಮಾರು 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿದೆ ಎಂದು ದೂರುದಾರ ದಿನೇಶ್ ರಾವ್ ಮಾಹಿತಿ ನೀಡಿದ್ದಾರೆ.