ಬೆಂಗಳೂರು: ನಾಳೆಯಿಂದ (ಅ.12) ಓಲಾ, ಉಬರ್ ಆಟೊ ಸೇವೆ ಸ್ಥಗಿತ

ಸಾಂದರ್ಭಿಕ ಚಿತ್ರ
ಬೆಂಗಳೂರು, ಅ.11: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ನಡೆಯುತ್ತಿರುವ ಆ್ಯಪ್ ಆಧಾರಿತ ಆಟೊ ಸೇವೆಯನ್ನು ನಾಳೆಯಿಂದ (ಅ.12) ಬಂದ್ ಮಾಡಲು ಖಾಸಗಿ ಕಂಪೆನಿಗಳಿಗೆ ಸಾರಿಗೆ ಇಲಾಖೆ ಸೂಚಿಸಿದೆ.
ಓಲಾ, ಉಬರ್ ಮತ್ತು ರ್ಯಾಪಿಡೋ ಕಂಪೆನಿಗಳು ಆ್ಯಪ್ ಮೂಲಕ ಕಾನೂನು ಬಾಹಿರವಾಗಿ ಆಟೊ ಸೇವೆ ನೀಡುತ್ತಿರುವ ಕುರಿತು ಮಂಗಳವಾರ ಸಾರಿಗೆ ಆಯುಕ್ತ ಟಿ.ಎಚ್.ಎಂ.ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಟೊರಿಕ್ಷಾ ಸೇವೆ ಬುಧವಾರದಿಂದ ಸ್ಥಗಿತವಾಗಲಿದೆ ಎಂದು ಪ್ರಕಟಿಸಲಾಯಿತು.
ಈ ಕುರಿತು ಸಭೆಯಲ್ಲಿ ಮಾತನಾಡಿದ ಟಿ.ಎಚ್.ಎಂ.ಕುಮಾರ್, ಆ್ಯಪ್ ಆಧಾರಿತ ಆಟೊ ಸೇವೆ ಅನಧಿಕೃತ ಆಗಿರುವುದರಿಂದ ಆಟೊ ಚಾಲಕರು ಮತ್ತು ಪ್ರಯಾಣಿಕರು ಆ್ಯಪ್ ಸೇವೆ ಬಳಕೆ ಮಾಡಬಾರದು. ಬಳಕೆ ಮಾಡಿ ತೊಂದರೆ ಅನುಭವಿಸಿದರೆ ಅದಕ್ಕೆ ಇಲಾಖೆ ಜವಾಬ್ದಾರಿ ಆಗುವುದಿಲ್ಲ. ಅಲ್ಲದೆ, ಚಾಲಕರಿಗೆ 5 ಸಾವಿರ ರೂ.ವರೆಗೂ ದಂಡ ವಿಧಿಸಲಾಗುವುದು. ಈ ಸಂಬಂಧ ಶೀಘ್ರದಲ್ಲಿಯೇ ಪ್ರಕಟಣೆಯನ್ನೂ ಹೊರಡಿಸಲಾಗುವುದೆಂದು ಅವರು ಹೇಳಿದರು.
ಸಭೆಯಲ್ಲಿ ಆ್ಯಪ್ ಆಟೊ ಸೇವೆ ನೀಡುವ ಸಂಬಂಧ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗುವುದು ಎಂದು ಕಂಪೆನಿ ಪ್ರತಿನಿಧಿಗಳು ಉಲ್ಲೇಖಿಸಿದ್ದಾರೆ. ಒಂದು ವೇಳೆ ಅರ್ಜಿ ಸಲ್ಲಿಸಿದರೆ ಅದನ್ನು ಸರಕಾರಕ್ಕೆ ರವಾನಿಸಲಾಗುವುದು. ಬಳಿಕ ಈ ವಿಷಯದಲ್ಲಿ ಸರಕಾರವೇ ತೀರ್ಮಾನ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಹಾಸನ: ರೈಲ್ವೆ ಹಳಿ ಮೇಲೆ ಉರುಳಿಬಿದ್ದ ಕಾರಿನಲ್ಲಿ ಮೃತದೇಹ ಪತ್ತೆ!
ಅದು ಅಲ್ಲದೆ, ಕಳೆದ ಒಂದು ವರ್ಷದಿಂದಲೂ ಈ ಕಂಪೆನಿಗಳ ಪರವಾನಗಿ ನವೀಕರಣ ಆಗಿಲ್ಲ. ಈ ವಿಷಯದಲ್ಲಿ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಇಡೀ ಆ್ಯಪ್ ರದ್ದುಗೊಳಿಸಲು ಸಾಧ್ಯವಿಲ್ಲ. ಇಂದಿನ ಸಭೆಯ ನಡಾವಳಿಯನ್ನೂ ಹೈಕೋರ್ಟ್ಗೆ ಸಲ್ಲಿಸಲಾಗುವುದು. ಆನಂತರ ಮುಂದಿನ ಪ್ರಕ್ರಿಯೆ ಬಗ್ಗೆ ಚರ್ಚಿಸಲಾಗುವುದು ಎಂದರು.
ಪ್ರಮುಖವಾಗಿ ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ನಿಯಮ–2016ರ ಪ್ರಕಾರ ಆಟೊ ಸೇವೆ ಒದಗಿಸಲು ಈ ಕಂಪೆನಿಗಳಿಗೆ ಅವಕಾಶ ಇಲ್ಲ. ಈ ಬಗ್ಗೆ ಅವರಿಗೆ ಮನವರಿಕೆ ಮಾಡಿ, ಕಾನೂನು ನಿಯಮಗಳನ್ನು ತಿಳಿಸಲಾಗಿದೆ. ಹೀಗಾಗಿ ಆಟೊ ಸೇವೆಯನ್ನು ತ್ವರಿತವಾಗಿ ಆ್ಯಪ್ಗಳಿಂದ ತೆಗೆಯಲು ಸೂಚನೆ ನೀಡಿದ್ದೇವೆ ಎಂದ ಅವರು, ಒಂದು ವೇಳೆ ಆ್ಯಪ್ ಚಾಲ್ತಿಯಲ್ಲಿದ್ದರೆ, ಸೈಬರ್ ಕ್ರೈಂ ಠಾಣೆಗೆ ದೂರು ನೀಡಿ ಕ್ರಮಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದರು.







