ವಾಮಂಜೂರು: ಶಾರದೋತ್ಸವ ಫ್ಲೆಕ್ಸ್ ಹರಿದ ಪ್ರಕರಣ; ಸುಮಿತ್ ಹೆಗ್ಡೆ, ಯತೀಶ್, ಪ್ರವೀಣ್ ಪೂಜಾರಿ ಬಂಧನ
ಕೃತ್ಯಕ್ಕೆ ಬಳಸಿದ್ದ ಕಾರು ವಶ

ಮಂಗಳೂರು, ಅ.11: ನಗರ ಹೊದವಲಯದ ವಾಮಂಜೂರು ಜಂಕ್ಷನ್‌ನಲ್ಲಿ ಹಾಕಲಾದ ಶಾರದೋತ್ಸವದ ಫ್ಲೆಕ್ಸ್ ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಕಾರು ವಶಪಡಿಸಲಾಗಿದೆ.
ಬಂಧಿತರನ್ನು ಸ್ಥಳೀಯರೇ ಆದ ಸುಮಿತ್ ಹೆಗ್ಡೆ (25), ಯತೀಶ್ ಪೂಜಾರಿ (24), ಪ್ರವೀಣ್ ಪೂಜಾರಿ (24) ಎಂದು ಗುರುತಿಸಲಾಗಿದೆ. ಇವರು ಸಂಘಪರಿವಾರದ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು ಎಂದು ತಿಳಿದು ಬಂದಿದೆ.
ವಾಮಂಜೂರು ಜಂಕ್ಷನ್ ಬಳಿ ಶಾರದೋತ್ಸವ ಕಾರ್ಯಕ್ರಮದ ಬಗ್ಗೆ ವಾಮಂಜೂರು ಫ್ರೆಂಡ್ಸ್ ಎಂಬ ಸಂಘಟನೆಯ ಸದಸ್ಯರು ಫ್ಲೆಕ್ಸ್‌ಗಳನ್ನು ಹಾಕಿದ್ದರು. ಅ.8ರಂದು ಮಧ್ಯರಾತ್ರಿ ಫ್ಲೆಕ್ಸ್‌ನ್ನು ಹರಿದು ಹಾಕಲಾಗಿತ್ತು.
ಧಾರ್ಮಿಕ ಭಾವನೆಗಳಿಗೆ ಅವಮಾನಗೊಳಿಸುವ ಉದ್ದೇಶದಿಂದ ಈ ಕೃತ್ಯವನ್ನು ಎಸಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಲಾಗಿತ್ತು. ಅದರಂತೆ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ಅದರಂತೆ ಮಂಗಳವಾರ ಮೂವರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಲಾಗಿದೆ.
ವಾಮಂಜೂರು ಫ್ರೆಂಡ್ಸ್ ಹುಲಿ ವೇಷ ತಂಡದವರು ದಸರಾ ಸಂದರ್ಭ ಹುಲಿ ವೇಷ ಹಾಕಿದರೆ, ವಾಮಂಜೂರು ಟೈಗರ್ಸ್ ತಂಡದವರು ಗಣೇಶೋತ್ಸವಕ್ಕೆ ಹುಲಿ ವೇಷ ಹಾಕುತ್ತಿದ್ದರು. ಬಂಧಿತ ಆರೋಪಿಗಳು ವಾಮಂಜೂರು ಟೈಗರ್ಸ್ ತಂಡದ ಸದಸ್ಯರು ಎನ್ನಲಾಗಿದೆ. ಈ ಸಂಘಟನೆಗಳ ನಡುವಿನ ವೈಷಮ್ಯವೇ ಕೃತ್ಯಕ್ಕೆ ಕಾರಣ ಎಂದು ಹೇಳಲಾಗಿದೆ. ಫ್ಲೆಕ್ಸ್‌ಗೆ ಹಾನಿಗೈಯ್ಯುವ ಮೂಲಕ ಆರೋಪಿಗಳು ಸಮಾಜದಲ್ಲಿ ಅಶಾಂತಿ ಕೆಡಿಸುವ ಪ್ರಯತ್ನ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಪ್ರಕರಣ ದಾಖಲಿಸಿದ್ದ ಪೊಲೀಸರು ವಾಮಂಜೂರು ಫ್ರೆಂಡ್ಸ್‌ನವರು ಸ್ಥಳೀಯ ಕೆಲವರ ಮೇಲೆ ಶಂಕೆ ವ್ಯಕ್ತಪಡಿಸಿ ನೀಡಿದ ದೂರು ಮತ್ತು ಸಿಸಿಟಿವಿ ದೃಶ್ಯಾವಳಿಯ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
