ಭೋಪಾಲ ಅನಿಲ ದುರಂತ: ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರ ಕೋರಿ ದಾವೆ ಮುಂದುವರಿಸಲು ಸಿದ್ಧ; ಕೇಂದ್ರದ ಹೇಳಿಕೆ

Photo : Bhopal gas tragedy / NDTV
ಹೊಸದಿಲ್ಲಿ,ಅ.11: 1984ರ ಭೋಪಾಲ ಅನಿಲ ದುರಂತದಲ್ಲಿ ಬದುಕುಳಿದವರಿಗಾಗಿ ಅಮೆರಿಕದ ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ (ಯುಸಿಸಿ) ನಿಂದ ಹೆಚ್ಚುವರಿ ಪರಿಹಾರವನ್ನು ಕೋರಿ ದಾವೆಯನ್ನು ತಾನು ಮುಂದುವರಿಸುವುದಾಗಿ ಕೇಂದ್ರವು ಮಂಗಳವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.
ನ್ಯಾಯಾಲಯವು ಸೋಮವಾರ ಈ ವಿಷಯದಲ್ಲಿ ಸರಕಾರದ ನಿಲುವನ್ನು ಕೇಳಿತ್ತು.
ಯುಸಿಸಿಯ ವಾರಸುದಾರರಿಂದ ಕೈಗಾರಿಕಾ ಅವಘಡದ ಸಂತ್ರಸ್ತರಿಗೆ 7,844 ಕೋ.ರೂ.ಗಳ ಹೆಚ್ಚುವರಿ ಪರಿಹಾರವನ್ನು ಕೋರಿ 2010ರಲ್ಲಿ ಆಗಿನ ಯುಪಿಎ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಕ್ಯುರೇಟಿವ್ ಅರ್ಜಿ (ಪರಿಹಾರಕ ಅರ್ಜಿ)ಯನ್ನು ಸಲ್ಲಿಸಿತ್ತು.
ಪರಿಹಾರವನ್ನು 750 ಕೋ.ರೂ.ಗಳಿಗೆ ನಿಗದಿಗೊಳಿಸಿದ್ದ ಸರ್ವೋಚ್ಚ ನ್ಯಾಯಾಲಯದ 1989ರ ತೀರ್ಪಿನ ಮರುಪರಿಶೀಲನೆಯನ್ನು ತನ್ನ ಅರ್ಜಿಯಲ್ಲಿ ಕೋರಿದ್ದ ಕೇಂದ್ರವು,750 ಕೋ.ರೂ.ಗಳ ಪರಿಹಾರವು ಸಾವುಗಳ ಸಂಖ್ಯೆ,ಗಾಯಗಳು ಮತ್ತು ನಷ್ಟಗಳ ಕುರಿತು ತಪ್ಪುಊಹೆಗಳನ್ನು ಆಧರಿಸಿತ್ತು ಮತ್ತು ನಂತರದ ಪರಿಸರ ಅವನತಿಯನ್ನು ಪರಿಗಣನೆಗೆ ತೆಗೆದುಕೊಂಡಿರಲಿಲ್ಲ ಎಂದು ವಾದಿಸಿತ್ತು.
ಪ್ರಕರಣದಲ್ಲಿ ತಮ್ಮನ್ನು ಕಕ್ಷಿಗಳನ್ನಾಗಿಸಬೇಕು ಎಂದು ಕೋರಿ ಸರಕಾರೇತರ ಸಂಸ್ಥೆ (ಎನ್ಜಿಒ)ಗಳು ಸಲ್ಲಿಸಿರುವ ಅರ್ಜಿಗಳ ಸಮರ್ಥನೀಯತೆಯನ್ನು ಯುಸಿಸಿ ಪ್ರಶ್ನಿಸಿದೆ ಎನ್ನುವುದನ್ನು ಮಂಗಳವಾರ ವಿಚಾರಣೆ ಸಂದರ್ಭದಲ್ಲಿ ನ್ಯಾ.ಎಸ್.ಕೆ.ಕೌಲ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಗಮನಕ್ಕೆ ತೆಗೆದುಕೊಂಡಿತು. ತೀರ್ಪು ಹೊರಬಿದ್ದ 19 ವರ್ಷಗಳ ಬಳಿಕ ಎನ್ಜಿಒಗಳು ನ್ಯಾಯಾಲಯವನ್ನು ಸಂಪರ್ಕಿಸಿದ್ದು ಏಕೆ ಎಂದು ಕಂಪನಿಯು ಪ್ರಶ್ನಿಸಿದೆ.
ನ್ಯಾಯಾಲಯವು ಮುಂದಿನ ವಿಚಾರಣೆಯನ್ನು 2023,ಜ.10ರಂದು ಕೈಗೆತ್ತಿಕೊಳ್ಳಲಿದೆ.
ದುರಂತದಲ್ಲಿ ಬದುಕುಳಿದವರು ಸೂಕ್ತ ಪರಿಹಾರ ಮತ್ತು ವಿಷಕಾರಿ ಅನಿಲ ಸೋರಿಕೆಯಿಂದ ಉಂಟಾಗಿರುವ ಕಾಯಿಲೆಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆಗಾಗಿ ಆಗ್ರಹಿಸುತ್ತಿದ್ದಾರೆ. ಸೋಮವಾರ ಅನಿಲ ದುರಂತದ ಸಂತ್ರಸ್ತರು ದಿಲ್ಲಿಯ ನಿರ್ಮಾಣ ಭವನದ ಎದುರು ಪ್ರತಿಭಟನೆ ನಡೆಸಿದ್ದರು.
ಮೃತರು ಮತ್ತು ಗಾಯಾಳುಗಳ ಅಂಕಿಅಂಶಗಳನ್ನು ತಕ್ಷಣ ಸರಿಪಡಿಸದಿದ್ದರೆ ಕೇಂದ್ರದ ಪರಿಹಾರಕ ಅರ್ಜಿಯು ಸಂತ್ರಸ್ತರಿಗೆ ಇನ್ನಷ್ಟು ಅನ್ಯಾಯವನ್ನುಂಟು ಮಾಡುತ್ತದೆ ಎಂದು ಹೇಳಿದ ಭೋಪಾಲ ಅನಿಲ ಪೀಡಿತ ಮಹಿಳಾ ಪುರುಷ ಸಂಘರ್ಷ ಮೋರ್ಚಾದ ಸದಸ್ಯ ನವಾಬ್ ಖಾನ್ ಅವರು,2010ರಲ್ಲಿ ಭೋಪಾಲ ಕುರಿತು ಯುಪಿಎ ಸರಕಾರವನ್ನು ತೀಕ್ಷ್ಣವಾಗಿ ಟೀಕಿಸಿದವರಲ್ಲಿ ಹಾಲಿ ಸರಕಾರದ ನಾಯಕರು ಸೇರಿದ್ದರು,ಆದರೆ ಅಧಿಕಾರಕ್ಕೇರಿದ ಬಳಿಕ ಅವರು ಎಲ್ಲೂ ಕಾಣುತ್ತಿಲ್ಲ ಎಂದರು.







