ಮಂಜನಾಡಿ: ಮಾದಕ ವಸ್ತುಗಳ ವಿರುದ್ಧ ಜಾಗೃತಿಗಾಗಿ ಬೈಕ್ ಯಾತ್ರೆ

ಮಂಗಳೂರು : ಪ್ರವಾದಿ ಮುಹಮ್ಮದ್ ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಜನ್ಮ ಮಾಸ ಪ್ರಯುಕ್ತ ಅವರ ಮಾನವೀಯ ಸಂದೇಶದ ಪ್ರಚಾರದ ಭಾಗವಾಗಿ, ಅಲ್ ಮದೀನಾ ದಅವಾ ಕಾಲೇಜು ವಿದ್ಯಾರ್ಥಿಗಳು ನಡೆಸುವ ಮಾದಕ ವ್ಯಸನದ ವಿರುದ್ಧ ಜನ ಜಾಗೃತಿಗಾಗಿ ಬೈಕ್ ಯಾತ್ರೆಯನ್ನು ಕೈಗೊಂಡಿದ್ದಾರೆ.
ಅಲ್ ಮದೀನಾ ದ'ಅವಾ ಕಾಲೇಜು ಪ್ರಿನ್ಸಿಪಾಲ್ ಅಬ್ದುಲ್ ಸಲಾಂ ಅಹ್ಸನಿ ಯಾತ್ರೆಗೆ ಚಾಲನೆ ನೀಡಿದರು.
ಅಲ್ ಮದೀನಾದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ನಡೆಸುತ್ತಿರುವ ಮದ್ಯ ಹಾಗೂ ಮಾದಕ ವಸ್ತುಗಳ ವಿರುದ್ಧ ನಡೆಸುವ 1000 ಕಿ.ಮೀ ಬೈಕ್ ಯಾತ್ರೆಯು ರಾಜ್ಯದ 25 ಕೇಂದ್ರಗಳಲ್ಲಿ ಜಾಗೃತಿಯನ್ನು ಮೂಡಿಸುತ್ತಾ ರಾಜಧಾನಿಯತ್ತ ಸಂಚರಿಸುತ್ತಿದೆ.
ರವಿವಾರ ಬೆಳಿಗ್ಗೆ ಅಲ್ ಮದೀನಾ ಮಂಜನಾಡಿಯಿಂದ ಆರಂಭವಾದ ಈ ಯಾತ್ರೆ ಮೊಂಟೆ ಪದವು, ಮರಿಕ್ಕಳ, ಮಂಜನಾಡಿ, ಕಲ್ಕಟ್ಟ, ನಾಟೆಕಲ್, ದೇರಳಕಟ್ಟೆ ಕೇಂದ್ರಗಳ ಮೂಲಕ ರಾಜ್ಯ ರಾಜಧಾನಿಯತ್ತ ಸಂಚರಿಸುತ್ತಿದೆ.
ಮಾದಕ ಮಾರುಕಟ್ಟೆಗಳು ಹಾಗೂ ಇವನ್ನು ಪೋಷಿಸಿ ಬೆಳೆಸುವ ಮಾಫಿಯಾ ವಿರುದ್ಧ ಕಠಿ ಕಾನೂನು ಕ್ರಮ ಜರುಗಬೇಕು. ಇದಕ್ಕಾಗಿ ಸರ್ಕಾರ, ಧಾರ್ಮಿಕ - ಸಾಮಾಜಿಕ ಸಂಘ ಸಂಸ್ಥೆಗಳು ಕೈಜೋಡಿಸಬೇಕು. ಯುವ ಜನತೆ ಇವುಗಳಿಂದ ಹೊರ ಬರಬೇಕು ಎಂಬ ಆಶಯದೊಂದಿಗೆ ಈ ವಿಶಿಷ್ಟ ಜಾಗೃತಿ ಕೈಗೊಳ್ಳಲಾಗಿದೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಸಂಘಟಕರು ತಿಳಿಸಿದ್ದಾರೆ.