ಅಭಿವೃದ್ಧಿಶೀಲ ದೇಶಗಳಿಗೆ ಗಂಭೀರ ಸಾಲದ ಬಿಕ್ಕಟ್ಟು: ವಿಶ್ವಸಂಸ್ಥೆ ಎಚ್ಚರಿಕೆ
UNITED NATIONS(UN)
ಲಂಡನ್, ಅ.11: ಗಂಭೀರ ಸಾಲದ ಬಿಕ್ಕಟ್ಟು ಈಗ ವಿಶ್ವದ ಬಡ ಭಾಗಗಳಲ್ಲಿ ಹಿಡಿತ ಸಾಧಿಸುತ್ತಿದೆ ಎಂಬ ದತ್ತಿಸಂಸ್ಥೆ ಹಾಗೂ ಸಂಸ್ಥೆಗಳ ಎಚ್ಚರಿಕೆಗೆ ಈಗ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ(ಯುಎನ್ಡಿಪಿ) ಧ್ವನಿಗೂಡಿಸಿದೆ.
ಅಭಿವೃದ್ಧಿಶೀಲ ಆರ್ಥಿಕತೆಗಳಲ್ಲಿ ಗಂಭೀರ ಸಾಲದ ಬಿಕ್ಕಟ್ಟು ತೆರೆದುಕೊಳ್ಳುತ್ತಿದೆ ಮತ್ತು ಇದರಿಂದ ಭವಿಷ್ಯದ ದೃಷ್ಟಿಕೋನ ಮತ್ತಷ್ಟು ಹದಗೆಡುವ ಸಾಧ್ಯತೆ ಹೆಚ್ಚಿದೆ. ವಿಶ್ವದ 50%ಕ್ಕೂ ಹೆಚ್ಚಿನ ಕಡು ಬಡವರಿರುವ 54 ದೇಶಗಳಿಗೆ ಈಗ ತಕ್ಷಣದ ಸಾಲ ಪರಿಹಾರದ ಅಗತ್ಯವಿದೆ, ಇಲ್ಲದಿದ್ದರೆ ಇವರು ಮತ್ತಷ್ಟು ಬಡತನದ ಸಂಕಷ್ಟಕ್ಕೆ ಇಳಿಯಲಿದ್ದು ಹವಾಮಾನ ಬದಲಾವಣೆಯ ಸಮಸ್ಯೆಯನ್ನು ಎದುರಿಸಲು ಇವರಿಗೆ ಕಷ್ಟವಾಗಬಹುದು ಎಂದು ಮಂಗಳವಾರ ಬಿಡುಗಡೆಗೊಳಿಸಿದ ಹೊಸ ವರದಿಯಲ್ಲಿ ಯುಎನ್ಡಿಪಿ ಅಭಿಪ್ರಾಯ ಪಟ್ಟಿದೆ. ಇತ್ತೀಚೆಗೆ ಐಎಂಎಫ್ ಮತ್ತು ವಿಶ್ವಬ್ಯಾಂಕ್ ಜಾಗತಿಕ ಆರ್ಥಿಕ ಹಿಂಜರಿತದ ಆತಂಕ ವ್ಯಕ್ತಪಡಿಸಿದ ಸಂದರ್ಭದಲ್ಲೇ ವಿಶ್ವಸಂಸ್ಥೆಯ ಈ ಎಚ್ಚರಿಕೆ ಸಂದೇಶ ಹೊರಬಿದ್ದಿದೆ.
ಈ ಸಮಸ್ಯೆ ಬಿಗಡಾಯಿಸುವ ಮುನ್ನ ಅವುಗಳನ್ನು ನಿಭಾಯಿಸುವ ಮಾರ್ಗಗಳನ್ನು ನಾವು ಹುಡುಕಬೇಕಿದೆ. ಸಾಲದ ಹೊಂದಾಣಿಕೆ, ಹೆಚ್ಚಿನ ದೇಶಗಳಿಗೆ ವ್ಯಾಪಕ ಪರಿಹಾರ ಕ್ರಮಗಳು ಮತ್ತು ಬಿಕ್ಕಟ್ಟಿನ ಸಮಯದಲ್ಲಿ ಸಾಲ ಮರುಪಾವತಿಗೆ ಹೆಚ್ಚುವರಿ ಸಮಯ ಒದಗಿಸುವುದು ಇತ್ಯಾದಿ ಸರಣಿ ಕ್ರಮಗಳ ತುರ್ತು ಅಗತ್ಯವಿದೆ ಎಂದು ಯುಎನ್ಡಿಪಿ ನಿರ್ವಾಹಕ ಅಚಿಮ್ ಸ್ಟೈನರ್ ಹೇಳಿದ್ದಾರೆ. ಪರಿಣಾಮಕಾರಿ ಸಾಲದ ಪುನರ್ರಚನೆಯಿಲ್ಲದೆ ಬಡತನವು ಹೆಚ್ಚಾಗುತ್ತದೆ ಮತ್ತು ತಾಪಮಾನ ತಗ್ಗಿಸುವಿಕೆಯಲ್ಲಿ ಅಗತ್ಯವಿರುವ ಹೂಡಿಕೆ ಸಾಧ್ಯವಿಲ್ಲ ಎಂದು ವರದಿ ಹೇಳಿದೆ.