ಕಾಂಗ್ರೆಸ್ ಪಾಲಿನ ಸೆರಗಿನ ಕೆಂಡ ಶಶಿ ತರೂರ್

PHOTO: PTI
ಭಾರತದ ರಾಜಕಾರಣದಲ್ಲಿ ಒಬ್ಬ ರಾಜಕಾರಣಿ ಹೇಗೆ ವರ್ತಿಸಬೇಕು ಹಾಗೆ ಎಂದೂ ವರ್ತಿಸದೆ, ರಾಜಕೀಯ ಹೇಗೆ ಮಾಡಬಾರದೋ ಹಾಗೆಯೇ ಮಾಡಿಯೂ, ತನ್ನ ಪಕ್ಷ ಸೋಲಿನ ಪ್ರಪಾತಕ್ಕೆ ಇಳಿಯುತ್ತಿರುವಾಗಲೇ, ತವರು ರಾಜ್ಯದ ಸ್ವಪಕ್ಷೀಯರ ಚಿತಾವಣೆಯನ್ನೂ ಎದುರಿಸಿ ಸತತ ಮೂರು ಬಾರಿ ಲೋಕಸಭಾ ಚುನಾವಣೆ ಗೆಲ್ಲುವುದು, ರಾಷ್ಟ್ರ ರಾಜಕೀಯದಲ್ಲಿ ಸದಾ ಚಾಲ್ತಿಯಲ್ಲಿರುವುದು, ಘಟಾನುಘಟಿಗಳಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ನಾನೂ ಸ್ಪರ್ಧಿ ಎಂದು ಕಣಕ್ಕಿಳಿಯುವುದು-ಇವೆಲ್ಲ ತರೂರ್ಗೆ ಮಾತ್ರ ಸಾಧ್ಯ.
quockerwodger ಕ್ವಾಕರ್ವಾಜರ್
ಇದೇನಿದು ಎಂದು ನೀವು ತಲೆ ಕೆಡಿಸಿಕೊಳ್ಳುವ ಮೊದಲೇ ಹೇಳಿಬಿಡುತ್ತೇನೆ. ಇದು ಹೊಸತಲ್ಲ, ಸುಮಾರು ಒಂದೂವರೆ ಶತಮಾನಕ್ಕೂ ಹೆಚ್ಚಿನ ಇತಿಹಾಸವಿರುವ ಪದವಿದು. ಇದರ ಅರ್ಥ ಮರದ ಕೈಗೊಂಬೆ. ರಾಜಕೀಯದಲ್ಲಿ ಇದನ್ನು ಸ್ವತಃ ತನ್ನ ಜನರನ್ನು ಸರಿಯಾಗಿ ಪ್ರತಿನಿಧಿಸದೆ ಪ್ರಭಾವಿ ಮೂರನೇ ವ್ಯಕ್ತಿಯ ತಾಳಕ್ಕೆ ತಕ್ಕಂತೆ ಕುಣಿಯುವವನು ಎಂಬರ್ಥದಲ್ಲಿ ಬಳಸಲಾಗುತ್ತದೆ.
ಇದನ್ನು ಈಗ್ಯಾಕೆ ಹೇಳುತ್ತಿರೋದು ಅಂದ್ರೆ, ಯಾರಿಗೂ ಗೊತ್ತೇ ಇಲ್ಲದ ಈ ವಿಚಿತ್ರ ಉಚ್ಚಾರಣೆಯ ಪದವನ್ನು ಈಗ ತಂದು ಪರಿಚಯಿಸಿದ ವ್ಯಕ್ತಿ ಭಾರೀ ಸುದ್ದಿಯಲ್ಲಿದ್ದಾರೆ. ಅಷ್ಟೇ ಅಲ್ಲ, ಆ ವ್ಯಕ್ತಿಯ ಬಗ್ಗೆಯೂ ಬಹಳ ಜನರು ಈ ಮೇಲಿನ ಪದವನ್ನೇ ಬಳಸುತ್ತಾರೆ.
ಅವರೇ ಡಾ. ಶಶಿ ತರೂರ್
ರಾಜತಾಂತ್ರಿಕರು ಅದೆಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲೂ ಅದೆಷ್ಟೇ ಇರಿಸು ಮುರಿಸಿನ ವಿಷಯವನ್ನಾದರೂ ಅತ್ಯಂತ ನಯ ನಾಜೂಕಿನಿಂದ ಬಹಳ ಜಾಣತನದಿಂದ ಹೇಳುತ್ತಾರೆ. ಹೇಳಬೇಕಾದ ಎಲ್ಲವನ್ನೂ ಹೇಳಿದರೂ ಎಲ್ಲೂ ಎದುರಿನವರ ಕೈಗೆ ಅವರು ಸಿಕ್ಕಿ ಹಾಕಿಕೊಳ್ಳುವುದಿಲ್ಲ. ಆದರೆ ವಿಶ್ವಸಂಸ್ಥೆಯಂತಹ ಅತ್ಯುನ್ನತ ಸಂಸ್ಥೆಯಲ್ಲಿ ಜಾಗತಿಕ ಮಟ್ಟದ ರಾಜತಾಂತ್ರಿಕರಾಗಿದ್ದ ಶಶಿ ತರೂರ್ ಅಲ್ಲಿಂದ ಹೊರಬಂದ ಮೇಲೆ ಏನೇನು ಮಾಡಿದರೋ ಅದರಲ್ಲೆಲ್ಲ ಮತ್ತೆ ಮತ್ತೆ ವಿವಾದಕ್ಕೆ ತುತ್ತಾದರು. ಅವರೇ ಬೇಕೆಂದೇ ವಿವಾದಗಳನ್ನು ಸೃಷ್ಟಿಸಿಕೊಳ್ಳುತ್ತಾರೋ ಅಥವಾ ಅವರು ಏನು ಮಾಡಿದರೂ ವಿವಾದಗಳು ಅವರ ಬೆನ್ನು ಬೀಳುತ್ತವೋ ಎಂದು ಜನರಿಗೆ ಗೊಂದಲವಾಗುವಷ್ಟು ಬಾರಿ ಅವರು ಇಕ್ಕಟ್ಟಿಗೆ ಸಿಲುಕಿದ್ದಾರೆ. ರಾಜಕೀಯದಲ್ಲಿ, ಮಾತಿನಲ್ಲಿ, ಬರಹಗಳಲ್ಲಿ, ವೈಯಕ್ತಿಕ ಜೀವನದಲ್ಲಿ ಕೊನೆಗೆ ಟ್ವೀಟ್ಗಳಲ್ಲೂ ಶಶಿ ತರೂರ್ ಕಳೆದ ೧೩ ವರ್ಷಗಳಲ್ಲಿ ಸುದ್ದಿಯಾಗಬಾರದ ರೀತಿಯಲ್ಲಿ ಸುದ್ದಿಯಾಗಿದ್ದೇ ಹೆಚ್ಚು.
ಅಂತಹ ಶಶಿ ತರೂರ್ ಇದೀಗ ಇನ್ನೊಂದು ವಿಶೇಷ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ದೇಶದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್ನ ಅಖಿಲ ಭಾರತ ಅಧ್ಯಕ್ಷ ಸ್ಥಾನಕ್ಕೆ ಅವರು ಸ್ಪರ್ಧಿ. ಹೈಕಮಾಂಡ್ ಅನುಮತಿ ಪಡೆದ ಬಳಿಕವೇ ನಾಮಪತ್ರ ಸಲ್ಲಿಸಿರುವ ತರೂರ್ ನನ್ನನ್ನು ಗೆಲ್ಲಿಸಿದರೆ ಪಕ್ಷದಲ್ಲಿ ಹೈಕಮಾಂಡ್ ಸಂಸ್ಕೃತಿ ಕೊನೆಗೊಳಿಸುತ್ತೇನೆ ಎಂದು ಹೇಳಿದ್ದಾರೆ. ೫ ದಶಕಗಳಿಂದ ಕಾಂಗ್ರೆಸ್ನಲ್ಲಿ ತಳಮಟ್ಟದಿಂದ ಬೆಳೆದು ಬಂದ, ಗಾಂಧಿ ಕುಟುಂಬವೇ ಬೆಂಬಲಿಸಿ ಕಣಕ್ಕಿಳಿಸಿರುವ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಒಂದು ಕಡೆ, ಕೆಲವೇ ವರ್ಷಗಳ ಹಿಂದೆ ಪಕ್ಷಕ್ಕೆ ಬಂದ, ತಳಮಟ್ಟದಲ್ಲಿ ಕಾರ್ಯಕರ್ತರು, ಸ್ಥಳೀಯ ನಾಯಕರ ಜೊತೆ ಯಾವುದೇ ಗಟ್ಟಿ ಸಂಪರ್ಕ ಇಲ್ಲದ, ಸ್ವತಃ ತವರು ರಾಜ್ಯದಲ್ಲೇ ಪಕ್ಷದ ನಾಯಕರ ವಿರೋಧ ಕಟ್ಟಿಕೊಂಡಿರುವ ತರೂರ್ ಒಂದು ಕಡೆ.
ಇಂತಹ ತರೂರ್ ನಾನು ಗೆದ್ದು ಕಾಂಗ್ರೆಸ್ ಅನ್ನು ರಿಪೇರಿ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ೨೦೦೯ರಲ್ಲಿ ಚುನಾವಣೆಗೆ ನೀವು ಸ್ಪರ್ಧಿಸುತ್ತೀರಾ ಎಂದು ಕಾಂಗ್ರೆಸ್ ಅಧ್ಯಕ್ಷರೇ ಕೇಳಿದರು, ನಾನು ಒಪ್ಪಿದೆ ಎಂದು ಶಶಿ ತರೂರ್ ಹೇಳುತ್ತಾರೆ. ಆದರೆ ವಿಶ್ವಸಂಸ್ಥೆ ಬಿಟ್ಟು ಭಾರತಕ್ಕೆ ಬಂದು ಅವರೇ ಕಾಂಗ್ರೆಸ್ ಹೈಕಮಾಂಡ್ ಬಳಿ ಹೋಗಿ ನನಗೆ ಟಿಕೆಟ್ ಕೊಡಿ ಎಂದು ಕೇಳಿಕೊಂಡರು ಎಂಬುದು ಕಾಂಗ್ರೆಸ್ ಒಳಗಿನಿಂದ ಬರುವ ಸುದ್ದಿ. ಅದನ್ನೇ ಹೇಳೋದು ಶಶಿ ತರೂರ್ ಸ್ಟೈಲ್ ಅಂತ. ಅವರ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳೋದು ಅವರು ಮಾತಾಡುವ, ಬರೆಯುವ ಇಂಗ್ಲಿಷ್ ಅನ್ನು ತಿಳಿದುಕೊಂಡಷ್ಟೇ ಕಷ್ಟ. ಕಾಂಗ್ರೆಸ್ನಲ್ಲಿದ್ದು ದಶಕದ ಮೇಲಾದರೂ ಇನ್ನೂ ಅಲ್ಲಿಗೇ ಸರಿಯಾಗಿ ಸಲ್ಲದವರು, ದಿಢೀರನೆ ಬಿಜೆಪಿ, ಮೋದಿ ಅಭಿಮಾನಿಗಳಿಗೆ ಖುಷಿ ಆಗುವ ಹಾಗೆ ಮಾತಾಡುವವರು, ಮತ್ತೆ ಕಾಂಗ್ರೆಸ್ ಅನ್ನು ಸರಿದಾರಿಗೆ ತರಲು ಅದಕ್ಕೆ ನಾನೇ ಅಧ್ಯಕ್ಷನಾಗುತ್ತೇನೆ ಎಂದು ಹೇಳುವವರು - ಅವರೇ ಶಶಿ ತರೂರ್.
ವಿಶ್ವಸಂಸ್ಥೆಯಲ್ಲಿ ಅಧೀನ ಮಹಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಶಶಿ ತರೂರ್ ೨೦೦೬ರಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿ ಬಾನ್ ಕಿ ಮೂನ್ ಎದುರು ಸೋತರು. ಆ ಬಳಿಕ ೨೦೦೭ರಲ್ಲಿ ವಿಶ್ವಸಂಸ್ಥೆಗೆ ರಾಜೀನಾಮೆ ಕೊಟ್ಟು ಹೊರಬಂದರು. ದುಬೈ ಮೂಲದ ಕಂಪೆನಿಯೊಂದಕ್ಕೆ ಸಲಹೆಗಾರನಾಗಿ ಸೇರಿಕೊಂಡರು. ಅಲ್ಲಿಂದ ಆಗಾಗ ಭಾರತ ಭೇಟಿ ಹೆಚ್ಚಿಸಿದ ತರೂರ್ ಬರವಣಿಗೆಯಲ್ಲೂ ಸಕ್ರಿಯರಾದರು. ಪ್ರಮುಖ ಪತ್ರಿಕೆಗಳಲ್ಲಿ ಆಗಾಗ ಅವರ ಲೇಖನಗಳು ಪ್ರಕಟವಾದವು. ಪುಸ್ತಕಗಳನ್ನು ಬರೆದರು. ಆಗಲೇ ರಾಜಕೀಯ ಆಸಕ್ತಿಯೂ ಬೆಳೆದು ೨೦೦೯ ರ ಲೋಕಸಭಾ ಚುನಾವಣೆಗೆ ಕೇರಳದ ತಿರುವನಂತಪುರಂನಿಂದ ಕಾಂಗ್ರೆಸ್ ಅಭ್ಯರ್ಥಿಯಾದರು. ಕೇರಳ ಕಾಂಗ್ರೆಸ್ ನಾಯಕರಿಗೇ ಇದು ಇಷ್ಟವಿರಲಿಲ್ಲ. ಅವರ ತವರು ಕ್ಷೇತ್ರ ಪಾಲಕ್ಕಾಡ್ನಿಂದ ಸ್ಪರ್ಧಿಸಬಹುದಲ್ವಾ ಎಂದು ತಕರಾರು ತೆಗೆದರು. ಆದರೆ ಸೋನಿಯಾ, ಮನಮೋಹನ್ ಸಿಂಗ್ ತರೂರ್ ಬೆನ್ನಿಗಿದ್ದರು. ಅದೇ ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ತರೂರ್ ಭಾರತದಲ್ಲಿ ಮತ ಚಲಾಯಿಸಿದ್ದೂ ಅದೇ ಮೊದಲು. ಚುನಾವಣೆಯಲ್ಲಿ ಗೆದ್ದು ತರೂರ್ ಸಂಸದರಾದರು. ಇಷ್ಟದ ವಿದೇಶಾಂಗ ಇಲಾಖೆಯಲ್ಲೇ ರಾಜ್ಯ ಸಚಿವರೂ ಆದರು. ಆದರೆ ಒಂದೇ ವರ್ಷದೊಳಗೆ ಕೊಚ್ಚಿ ಐಪಿಎಲ್ ತಂಡದ ಬಿಡ್ ಕುರಿತ ವಿವಾದದಲ್ಲಿ ಸಿಲುಕಿ ಸಚಿವ ಸ್ಥಾನ ಕಳೆದುಕೊಂಡರು.
ಅದಕ್ಕೂ ಮೊದಲೇ ಸರಕಾರದ ಮಿತವ್ಯಯ ನೀತಿಯ ಬಗ್ಗೆ ವ್ಯಂಗ್ಯ ಮಾಡಲು ಹೋಗಿ ವಿಮಾನದ ಇಕಾನಮಿ ವಿಭಾಗವನ್ನು ದನಗಳನ್ನು ತುಂಬುವ ವಿಭಾಗ ಎಂಬರ್ಥದಲ್ಲಿ ಮಾತಾಡಿ ಎಡವಟ್ಟು ಮಾಡಿ ಕ್ಷಮೆ ಯಾಚಿಸಿದ್ದರು. ೨೦೧೪ರ ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ಕೆಲವು ತಿಂಗಳುಗಳಿರುವಾಗ ತರೂರ್ ದೊಡ್ಡ ಸಂಕಷ್ಟಕ್ಕೆ ಸಿಲುಕಿದರು. ಆ ವರ್ಷ ಜನವರಿ ತಿಂಗಳಲ್ಲಿ ದಿಲ್ಲಿಯ ವಿಲಾಸಿ ಹೊಟೇಲ್ ಒಂದರಲ್ಲಿ ತರೂರ್ ಅವರ ಮೂರನೇ ಪತ್ನಿ ಸುನಂದಾ ಪುಷ್ಕರ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತರೂರ್ ಮೇಲೆ ಆರೋಪ ಬಂತು. ಪ್ರಕರಣವೂ ದಾಖಲಾಯಿತು. ಕಾಂಗ್ರೆಸ್ ಕೂಡ ತೀರಾ ಸಮಸ್ಯೆಯಲ್ಲಿದ್ದ ಕಾಲವದು. ಎಲ್ಲೆಡೆ ಮೋದಿ ಪ್ರಚಾರ ಭರಾಟೆ ಜೋರಾಗಿತ್ತು. ಇನ್ನೇನು ತರೂರ್ ರಾಜಕೀಯ ಮುಗಿಯಿತು ಎಂದೇ ಎಲ್ಲರೂ ಭಾವಿಸಿದರು. ಆದರೆ ಆಗಿದ್ದೇ ಬೇರೆ. ದೇಶಾದ್ಯಂತ ಕಾಂಗ್ರೆಸ್ ಸೋತು ಸುಣ್ಣವಾದರೂ ತರೂರ್ ಮತ್ತೆ ಗೆದ್ದು ದಿಲ್ಲಿಗೆ ಹೋದರು.
ಭಾರತದ ರಾಜಕಾರಣದಲ್ಲಿ ಒಬ್ಬ ರಾಜಕಾರಣಿ ಹೇಗೆ ವರ್ತಿಸಬೇಕು ಹಾಗೆ ಎಂದೂ ವರ್ತಿಸದೆ, ರಾಜಕೀಯ ಹೇಗೆ ಮಾಡಬಾರದೋ ಹಾಗೆಯೇ ಮಾಡಿಯೂ, ತನ್ನ ಪಕ್ಷ ಸೋಲಿನ ಪ್ರಪಾತಕ್ಕೆ ಇಳಿಯುತ್ತಿರುವಾಗಲೇ, ತವರು ರಾಜ್ಯದ ಸ್ವಪಕ್ಷೀಯರ ಚಿತಾವಣೆಯನ್ನೂ ಎದುರಿಸಿ ಸತತ ಮೂರು ಬಾರಿ ಲೋಕಸಭಾ ಚುನಾವಣೆ ಗೆಲ್ಲುವುದು, ರಾಷ್ಟ್ರ ರಾಜಕೀಯದಲ್ಲಿ ಸದಾ ಚಾಲ್ತಿಯಲ್ಲಿರುವುದು, ಘಟಾನುಘಟಿಗಳಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ನಾನೂ ಸ್ಪರ್ಧಿ ಎಂದು ಕಣಕ್ಕಿಳಿಯುವುದು-ಇವೆಲ್ಲ ತರೂರ್ಗೆ ಮಾತ್ರ ಸಾಧ್ಯ.
ಈಗ ಅಂಬಾನಿ, ಅದಾನಿಗಳ ವಿರುದ್ಧ ರಾಹುಲ್ ಗಾಂಧಿ ನಿರಂತರ ಟೀಕಾ ಪ್ರಹಾರ ಮಾಡುತ್ತಿರುವಾಗಲೇ ನನಗೆ ಅಂಬಾನಿ, ಅದಾನಿ ಅಥವಾ ಅವರಂತೆ ಹೂಡಿಕೆ ಮಾಡಿ ದೇಶದ ಜನರ ಹಿತಾಸಕ್ತಿ ಕಾಪಾಡುವ ಯಾವುದೇ ಆನಿಗಳ ಬಗ್ಗೆ ಯಾವುದೇ ಅಲರ್ಜಿ ಇಲ್ಲ ಎಂದು ಯಾವುದೇ ಹಿಂಜರಿಕೆ ಇಲ್ಲದೆ ಹೇಳಿಯೂ ಕಾಂಗ್ರೆಸ್ ನಲ್ಲಿ ತನ್ನ ಹಿತಾಸಕ್ತಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಾದರೆ ಆ ನಾಯಕ ತರೂರ್ ಆಗಿರಲೇಬೇಕು.
೨೦೧೪ರಲ್ಲಿ ಮೋದಿ ಅಧಿಕಾರಕ್ಕೆ ಬಂದ ಕೂಡಲೇ ಘೋಷಿಸಿದ ಸ್ವಚ್ಛ ಭಾರತ್ ಅಭಿಯಾನಕ್ಕೆ ರಾಯಭಾರಿಯಾಗುವ ಪ್ರಧಾನಿಯ ಆಹ್ವಾನವನ್ನು ತರೂರ್ ಕೂಡಲೇ ಒಪ್ಪಿಕೊಂಡರು. ಸುನಂದಾ ಸಾವಿನ ಪ್ರಕರಣದಲ್ಲಿ ದಿಲ್ಲಿ ಪೊಲೀಸರ ಇಕ್ಕಳದಲ್ಲಿ ತರೂರ್ ಇದ್ದಿದ್ದಕ್ಕೂ ಇದಕ್ಕೂ ಜನರು ಸಂಬಂಧ ಕಲ್ಪಿಸಿದರು. ಪಕ್ಷ ವಕ್ತಾರನ ಹುದ್ದೆಯಿಂದ ಅವರನ್ನು ತೆಗೆದು ಹಾಕಿತು. ೨೦೨೧ರಲ್ಲಿ ದಿಲ್ಲಿ ಪೊಲೀಸರು ಅವರಿಗೆ ಸುನಂದಾ ಪ್ರಕರಣದಲ್ಲಿ ಕ್ಲೀನ್ಚಿಟ್ ಕೊಟ್ಟರು. ೨೦೧೮ರಲ್ಲಿ ಅವರ ಪುಸ್ತಕ ‘Why I Am A Hindu’ ಅಲ್ಲಿಯವರೆಗೂ ಅವರ ಬರಹಗಳನ್ನು ಕೊಂಡಾಡುತ್ತಿದ್ದ ಬಲಪಂಥೀಯ ಅಭಿಮಾನಿಗಳನ್ನು ಕೆರಳಿಸಿತು. ಆದರೆ ಮತ್ತೆ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ದೇಶಾದ್ಯಂತ ಧೂಳೀಪಟವಾದಾಗಲೂ ತಮ್ಮ ಸೀಟನ್ನು ಉಳಿಸಿಕೊಂಡರು.
ತನ್ನೆಲ್ಲ ವೈರುಧ್ಯಗಳ ಹೊರತಾಗಿಯೂ ಶಶಿ ತರೂರ್ ಅಪ್ಪಟ ಪ್ರತಿಭಾವಂತ, ಪ್ರಚಂಡ ಬುದ್ಧಿವಂತ, ಪ್ರಖರ ಚಿಂತಕ ಹಾಗೂ ಅತ್ಯುತ್ತಮ ಲೇಖಕ ಎಂಬುದರಲ್ಲಿ ಎರಡು ಮಾತಿಲ್ಲ. ಶ್ರದ್ಧೆಯಿಂದ ಕೂತು, ಹಠ ಹಿಡಿದು ಓದಿದರೆ ಸಾಮಾನ್ಯ ಹಿನ್ನೆಲೆಯಿಂದ ಬಂದವರೂ ಜೀವನದಲ್ಲಿ ಏನನ್ನಾದರೂ ಸಾಧಿಸುವುದು ಖಚಿತ ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ತರೂರ್. ಬಾಲ್ಯದಿಂದಲೇ ತರೂರ್ ಓದಿದ ಪುಸ್ತಕಗಳಿಗೆ ಲೆಕ್ಕವಿಲ್ಲ. ತನ್ನ ೧೩ನೇ ಹುಟ್ಟುಹಬ್ಬದಂದು ಪ್ರತಿದಿನ ಒಂದು ಪುಸ್ತಕದಂತೆ ವರ್ಷಕ್ಕೆ ೩೬೫ ಪುಸ್ತಕಗಳನ್ನು ಓದುವ ಸವಾಲು ಹಾಕಿಕೊಂಡ ತರೂರ್ ಪಟ್ಟಿ ಮಾಡಿಟ್ಟುಕೊಂಡು ಅಷ್ಟೂ ಪುಸ್ತಕಗಳನ್ನು ಓದಿದವರು. ಇನ್ನು ಓದಲು ಪುಸ್ತಕಗಳೇ ಉಳಿದಿಲ್ಲ ಎಂಬಂತಾದಾಗ ಬರೆಯಲು ಪ್ರಾರಂಭಿಸಿದರು. ೧೦ನೇ ವರ್ಷಕ್ಕೇ ಅವರ ಸಣ್ಣ ಕತೆ ಪ್ರಕಟವಾಗಿತ್ತು. ಈಗಲೂ ರಾಜಕೀಯದ ಎಲ್ಲ ಜಂಜಾಟಗಳ ನಡುವೆ ರಾತ್ರಿ ಎರಡು ಗಂಟೆವರೆಗೆ ಕುಳಿತು ಬರೆಯುತ್ತಾರೆ. ಈಗಷ್ಟೇ ಅವರ ೨೪ನೇ ಪುಸ್ತಕ ಅಂಬೇಡ್ಕರ್ ಜೀವನ ಚರಿತ್ರೆ ‘Ambedkar , a life’ ಪ್ರಕಟಿಸಿದ್ದಾರೆ. ಜೀವನದಲ್ಲಿ ಅದೆಷ್ಟೋ ಏರಿಳಿತಗಳನ್ನು ಕಂಡಿರುವ ತರೂರ್ಗೆ ಕ್ರಿಕೆಟ್ ಅಂದ್ರೆ ಪಂಚಪ್ರಾಣ. ಚುನಾವಣಾ ಪ್ರಚಾರದ ನಡುವೆ ಎಲ್ಲಾದರೂ ಟಿವಿಯಲ್ಲಿ ಕ್ರಿಕೆಟ್ ಮ್ಯಾಚ್ ಕಂಡಾಗ ಅಲ್ಲೇ ನಿಂತು ಕಾಯುತ್ತಿರುವ ಕಾರ್ಯಕರ್ತರನ್ನು ಪೀಕಲಾಟಕ್ಕೆ ಸಿಲುಕಿಸುವಷ್ಟು ಕ್ರಿಕೆಟ್ ಕ್ರೇಜ್ ಅವರದ್ದು.
ಅಂದ ಹಾಗೆ, ಕಾಂಗ್ರೆಸ್ಗೂ ತರೂರ್ಗೂ ಹಳೆಯ ನಂಟಿದೆ. ಕೋಲ್ಕತಾದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದು ದಿಲ್ಲಿಯ ಸೈಂಟ್ ಸ್ಟೀಫನ್ಸ್ನಲ್ಲಿ ಇತಿಹಾಸ ಪದವಿ ಪಡೆದ ತರೂರ್ ಬಳಿಕ ಅಮೆರಿಕದ ಟಫ್ಟ್ಸ್ ವಿವಿಯಲ್ಲಿ ಅಂತರ್ ರಾಷ್ಟ್ರೀಯ ಸಂಬಂಧಗಳು, ಕಾನೂನು ಹಾಗೂ ರಾಜತಾಂತ್ರಿಕತೆಯಲ್ಲಿ ಸ್ನಾತಕೋತ್ತರ ಪದವಿ ಬಳಿಕ ತನ್ನ ೨೨ನೇ ವಯಸ್ಸಲ್ಲೇ ಪಿಎಚ್. ಡಿ. ಪಡೆದು ದಾಖಲೆ ಬರೆದರು. ಆ ಪಿಎಚ್. ಡಿ.ಯ ವಿಷಯ ೧೯೬೭ರಿಂದ ೧೯೭೭ರವರೆಗಿನ ಇಂದಿರಾ ಗಾಂಧಿ ಅವರ ವಿದೇಶಾಂಗ ನೀತಿ. ಅದಕ್ಕಾಗಿ ಅವರು ಇಂದಿರಾ ಗಾಂಧಿಯ ಸಂದರ್ಶನವನ್ನೂ ಮಾಡಿದ್ದರು. ಆ ಹಿಂದೆಯೂ ಇಂದಿರಾ ಗಾಂಧಿಯನ್ನು ಎರಡು ಬಾರಿ ಅವರು ಭೇಟಿಯಾಗಿದ್ದರು. ಅಷ್ಟೇ, ಅಲ್ಲ ತಾನು ಭಾರತದ ನಾಗರಿಕ ಸೇವಾ ಪರೀಕ್ಷೆ ಬರೆಯದೆ ಇರಲು ನಿರ್ಧರಿಸಿದ್ದೇ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಗೆ ಪ್ರತಿಭಟನೆಯಾಗಿ ಎಂದು ಹಲವು ಬಾರಿ ಹೇಳಿದ್ದಾರೆ ತರೂರ್. ತುರ್ತುಪರಿಸ್ಥಿತಿ ಸಂದರ್ಭ ಅವರು ಬರೆದಿದ್ದ ‘ಪೊಲಿಟಿಕಲ್ ಮರ್ಡರ್’ ಎಂಬ ಕಿರುಗತೆಗೆ ನಿಷೇಧ ಹೇರಲಾಗಿತ್ತು.
ಇಂತಹ ವೈರುಧ್ಯಗಳ ಗೊಂಚಲು ಶಶಿ ತರೂರ್. ಈ ಬಾರಿ ಅಧ್ಯಕ್ಷರ ಹುದ್ದೆಗೆ ಸ್ಪರ್ಧಿಸಿರುವ ಇಬ್ಬರ ಪೈಕಿ ಅವರು ಎರಡನೇ ಸ್ಥಾನ ಪಡೆಯುವುದು ಬಹುತೇಕ ಖಚಿತ. ಆದರೆ ದಿಲ್ಲಿಯ ಕಾಲೇಜಿರಲಿ, ವಿಶ್ವಸಂಸ್ಥೆಯೇ ಇರಲಿ, ಈಗ ಕಾಂಗ್ರೆಸೇ ಇರಲಿ, ಎಲ್ಲೂ ಎರಡನೇ ಸ್ಥಾನಕ್ಕೆ ತೃಪ್ತಿ ಪಡುವ ವ್ಯಕ್ತಿ ತರೂರ್ ಅಲ್ಲ. ಹಾಗಾಗಿ ಅವರು ಯಾವತ್ತಿಗೂ ಕಾಂಗ್ರೆಸ್ ಪಾಲಿನ ಸೆರಗಿನ ಕೆಂಡ. ಬಹುಷಃ ಅವರಷ್ಟು ಜಾಣ, ಮಾತಿನ ಮಲ್ಲ, ವಿದ್ವತ್ ಉಳ್ಳವರು ಕಾಂಗ್ರೆಸ್ನಲ್ಲೇಕೆ, ಭಾರತದ ಯಾವುದೇ ಪಕ್ಷದಲ್ಲಿ ಬಹಳ ಕಡಿಮೆಯಿದ್ದಾರೆ. ಆದರೆ ಆ ಜಾಣ ಆಗಾಗ ಜಾರಿ ಬೀಳುತ್ತಿದ್ದರೆ ಮಾತ್ರ ಅವರ ಜೊತೆ ತಾನೂ ಬೀಳದಂತೆ ಅವರ ಪಕ್ಷ ಸ್ವಲ್ಪಹೆಚ್ಚೇ ಜಾಗರೂಕವಾಗಿರಬೇಕಾಗುತ್ತದೆ.







