ಬಿಹಾರ: ಪೊಲೀಸರನ್ನು ಹೊತ್ತೊಯ್ಯುತ್ತಿದ್ದ ಬಸ್ ಬೈಕ್ ಗೆ ಡಿಕ್ಕಿ, ಮೂವರು ಮೃತ್ಯು
ಬಸ್ ನಿಂದ ಇಳಿದು ಪರಾರಿಯಾದ ಪೊಲೀಸರು

ಪಾಟ್ನಾ: ಚಾಪ್ರಾ-ಸಿವಾನ್ ಹೆದ್ದಾರಿಯಲ್ಲಿ ಬುಧವಾರ ಬೆಳಗ್ಗೆ ಬಿಹಾರ ಪೊಲೀಸ್ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಬೈಕ್ ಸವಾರರು ಮೃತಪಟ್ಟಿದ್ದಾರೆ. ಅಪಘಾತದ ನಂತರ ಬಸ್ ನ ಇಂಧನ ಟ್ಯಾಂಕ್ ಸ್ಫೋಟಗೊಂಡ ಕಾರಣ ಬಸ್ ನಲ್ಲಿ ಬೆಂಕಿ ಹೊತ್ತಿಕೊಂಡಿತು.
ಡಿಯೋರಿಯಾ ಗ್ರಾಮದಲ್ಲಿ ಬೈಕ್‌ನಲ್ಲಿ ಬಂದ ಮೂರು ಮಂದಿ ಪೊಲೀಸ್ ಅಧಿಕಾರಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್‌ನಡಿಗೆ ಬಿದ್ದಿದ್ದರಿಂದ ಅಪಘಾತ ಸಂಭವಿಸಿದೆ. ಬೈಕ್ ಸವಾರನೊಬ್ಬ ಬೈಕ್ ಸಹಿತ ಬಸ್‌ನಡಿ ಸಿಲುಕಿದ್ದು, ಬಸ್ 100 ಗಜದವರೆಗೆ ಬೈಕನ್ನು ಎಳೆದೊಯ್ದ ಪರಿಣಾಮ ಬಸ್‌ನ ಇಂಧನ ಟ್ಯಾಂಕ್ ಸ್ಫೋಟಗೊಂಡು ಬೈಕ್ ಸವಾರ ಸಜೀವ ದಹನಗೊಂಡಿದ್ದಾನೆ.
ಅಪಘಾತದ ನಂತರ ಬಸ್ ಬೆಂಕಿಗೆ ಆಹುತಿಯಾಗಿದ್ದು, ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸ್ ಅಧಿಕಾರಿಗಳು ಬಸ್‌ನಿಂದ ಇಳಿದು ಪರಾರಿಯಾಗುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ.
ಸಿತಾಬ್ದಿಯಾರಾದಲ್ಲಿ ದಿವಂಗತ ರಾಜಕೀಯ ನಾಯಕ ಜಯಪ್ರಕಾಶ್ ನಾರಾಯಣ್ ಅವರ 120 ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿದ್ದ ಪೊಲೀಸರು ಬಸ್ ನಲ್ಲಿ ವಾಪಸಾಗುತ್ತಿದ್ದರು. ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಉಪಸ್ಥಿತರಿದ್ದರು.





