ಪ್ರಧಾನಿ ಮೋದಿ ಬಗ್ಗೆ ಯಾರೇ ಹಗುರವಾಗಿ ಮಾತನಾಡಿದರೆ ತಕ್ಷಣ ಪ್ರತಿಭಟಿಸಿ: ಕಾರ್ಯಕರ್ತರಿಗೆ ಬಿಎಸ್ ವೈ ಕರೆ
''ದೇಶದ ಶೇ.73ರಷ್ಟು ಜನರು ಮೋದಿ ಪರವಾಗಿದ್ದಾರೆ''

ಹೊಸಪೇಟೆ: 'ಇಡೀ ಪ್ರಪಂಚವೇ ಅಚ್ಚರಿಯಿಂದ ನೋಡುತ್ತಿರುವ ಮಹಾನ್ ನಾಯಕ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಯಾರೇ ಮುಖಂಡರು ಹಗುರವಾಗಿ ಮಾತನಾಡಿದರೆ ತಕ್ಷಣ ಪ್ರತಿಭಟಿಸಬೇಕು ಮತ್ತು ಹೇಳಿಕೆಗಳನ್ನು ಕೊಡಬೇಕು' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಆಯೋಜಿಸಿದ್ದ ಬಿಜೆಪಿ ಜನ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ಬಿಎಸ್ವೈಗೆ ವಯಸ್ಸಾಗಿದೆ, ಅರಳು ಮರಳಾಗಿದೆ ಅನಿಸುತ್ತಿದೆ' ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.
''ಸಿದ್ದರಾಮಯ್ಯನವರೇ, ರಾಹುಲ್ ಗಾಂಧಿ ಬಗ್ಗೆ ಮಾತನಾಡಲು ನಾನು ಸಿದ್ಧನಿರಲಿಲ್ಲ ಆದರೆ, ರಾಹುಲ್ ಗಾಂಧಿ ಅವರೇ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹಗುರವಾಗಿ ಮಾತನಾಡಿದ್ದರಿಂದ 'ನರೇಂದ್ರ ಮೋದಿ ಅವರ ಮುಂದೆ ರಾಹುಲ್ ಗಾಂಧಿ ಒಬ್ಬ ಸಾಮಾನ್ಯ ಬಚ್ಚಾ ಇದ್ದಂಗೆ' ಅಂತ ಹೇಳಿದ್ದೇನೆ' ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಇದನ್ನೂ ಓದಿ: ಬಿಎಸ್ವೈ ಇಷ್ಟು ಕೀಳುಮಟ್ಟದ ಹೇಳಿಕೆ ಕೊಡ್ತಾರೆಂದು ಅಂದ್ಕೊಂಡಿರಲಿಲ್ಲ: ಸಿದ್ದರಾಮಯ್ಯ ಆಕ್ರೋಶ
'ಪ್ರಧಾನಿ ಮೋದಿ ವಿರುದ್ಧ ಹೇಳಿಕೆ ಸಹಿಸಲ್ಲ': ಇತ್ತೀಚಿನ ಸರ್ವೇ ಪ್ರಕಾರ ದೇಶದ ಶೇ.73ರಷ್ಟು ಜನರು ಮೋದಿ ಪರವಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯಾರು ಏನು ಹೇಳಿದರು ಅದನ್ನೂ ಸಹಿಸಿಕೊಳ್ಳಲು ಸಾಧ್ಯ ಇಲ್ಲ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದರು.