ಬೀಚ್‌ಗಳಲ್ಲಿ ಜಾಗೃತಿ: ಮಹಿಳಾ ಬೈಕರ್ಸ್‌ಗಳಿಂದ 1300 ಕಿ.ಮೀ. ಸಂಚಾರ

ಉಡುಪಿ, ಅ.12: ಕಡಲ ತೀರದ ರಕ್ಷಣೆ, ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿ ಸುವ ಉದ್ದೇಶದಿಂದ ‘ಸೇವ್ ಮರೈನ್ ಲೈಫ್’ ಬೈಕ್ ಯಾತ್ರೆಯ ಮೂಲಕ ಬೆಂಗಳೂರಿನ ಸ್ವಾತಿ ಆರ್. ಮತ್ತು ಅನಿತಾ ಎಂ. ಮಂಗಳವಾರ ಹೂಡೆ ಕಡಲ ತೀರದಲ್ಲಿ ಜಾಗೃತಿ ಮೂಡಿಸಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.
ಭಾರತ ಸರಕಾರ, ನೆಹರು ಯುವ ಕೇಂದ್ರ ಉಡುಪಿ, ಸ್ವಚ್ಛ ಭಾರತ್ ಫ್ರೆಂಡ್ಸ್, ತೋನ್ಸೆ ಗ್ರಾಮ ಪಂಚಾಯತ್, ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿ ಯೂರು ರಾಷ್ಟ್ರೀಯ ಸೇವಾ ಯೋಜನೆ, ನಿರ್ಮಲ್ ತೋನ್ಸೆ, ಲಯನ್ಸ್ ಕ್ಲಬ್ ಸಂತೆಕಟ್ಟೆ, ಆರ್ಗನೈಸೇಶನ್ ಫಾರ್ ರೂರಲ್ ಡೆವಲಪ್ಮೆಂಟ್ ಎಜ್ಯುಕೇಶನ್ ಆಂಡ್ ರಿಸರ್ಚ್ ಆಶ್ರಯದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ನೆಹರೂ ಯುವ ಕೇಂದ್ರ ಉಡುಪಿ ಜಿಲ್ಲಾ ಯುವ ಅಧಿಕಾರಿ ವಿಲ್ಫ್ರೆಡ್ ಡಿಸೋಜ ಶುಭಹಾರೈಸಿದರು.
ಕನ್ನಡದ ಮೊದಲ ಮಹಿಳಾ ಮೋಟೋ ವ್ಲಾಗರ್ ಮತ್ತು ಇಂಡಿಯನ್ ಬುಕ್ ಆಫ್ ರೆಕಾರ್ಡ್ ಖ್ಯಾತಿಯ ಬೆಂಗಳೂರಿನ ಸ್ವಾತಿ ಆರ್. ಮಾತನಾಡಿ, ಸಿಂಗಲ್ ಯೂಸ್ ಪ್ಲಾಸ್ಟಿಕ್ ಪರಿಸರಕ್ಕೆ ಅತ್ಯಂತ ಮಾರಕವಾಗಿದ್ದು ಜನರ ಮನೋಭಾವದಲ್ಲಿ ಬದಲಾವಣೆಯಾದರೆ ಪರಿಸರ ಸಂರಕ್ಷಣೆಯ ಕೆಲಸ ಸುಲಭ ಸಾಧ್ಯ. ಉಡುಪಿ ಜಿಲ್ಲೆಯ ಎಲ್ಲಾ ಕಡಲ ತೀರಗಳಿಗೆ ಬ್ಲೂ ಫ್ಲ್ಯಾಗ್ ಮನ್ನಣೆ ಸಿಗುವಂತಾಗಬೇಕು ಎಂದರು.
ಸೇವ್ ಮರೈನ್ ಲೈಫ್ ಬೈಕ್ ಯಾತ್ರೆಗೆ ಅ.9ರಂದು ಬೆಂಗಳೂರಿನ ವಿಧಾನ ಸೌಧದ ಎದುರು ಚಾಲನೆ ನೀಡಲಾಗಿದ್ದು, ಅ.17ರವರೆಗೆ ಈ ಜಾಗೃತಿ ಯಾತ್ರೆ ನಡೆಯಲಿದೆ. ಸುಮಾರು 1300 ಕಿ.ಮೀ. ದೂರ ರಾಜ್ಯದ ಎಲ್ಲ ಕಡಲ ತೀರಗಳಿಗೆ ಬೈಕ್ ಮೂಲಕವೇ ಸಂಚರಿಸಿ, ಆಯ್ದ ಕಡೆಗಳಲ್ಲಿ ಜಾಗೃತಿ ಮೂಡಿಸಿ ಸ್ವಚ್ಛತಾ ಅಭಿಯಾನ ನಡೆಸಲಾಗುತ್ತದೆ. ಶೈಕ್ಷಣಿಕ ಸಂಸ್ಥೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜತೆಗೆ ಸಂವಾದ ಕಾರ್ಯಕ್ರಮ ನಡೆಸುವುದು ಕೂಡ ಯಾತ್ರೆಯ ಭಾಗವಾಗಿದೆ ಎಂದು ಸ್ವಾತಿ ಆರ್. ಹೇಳಿದರು.
ಈ ಸಂದರ್ಭದಲ್ಲಿ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಯೋಜನಾಧಿಕಾರಿ ಸುಷ್ಮಾ, ನಿರ್ಮಲ್ ತೋನ್ಸೆ ಅಧ್ಯಕ್ಷ ವೆಂಕಟೇಶ್ ಕುಂದರ್, ಲಯನ್ಸ್ ಕ್ಲಬ್ ಸಂತೆಕಟ್ಟೆ ಅಧ್ಯಕ್ಷ ಪ್ರವೀಣ್ ಕರ್ವಾಲೋ, ಕಾರ್ಯದರ್ಶಿ ಸುದರ್ಶನ್ ನಾಯಕ್, ಕೋಶಾಧಿಕಾರಿ ಗಣೇಶ್ ಡಿ., ರಾಘವೇಂದ್ರ ಪ್ರಭು ಕರ್ವಾಲು, ಉದಯ ನಾಯ್ಕ್, ಜೂಲಿಯಸ್ ಲೂವಿಸ್, ಗಣೇಶ್ ಪ್ರಸಾದ್ ನಾಯಕ್, ಅಸ್ವಿನಿ, ಶ್ರದ್ಧಾ, ಸಂಜನಾ, ಸಮೀಕ್ಷಾ, ರಕ್ಷಿತ್, ಸುಕಾಂತ್ ಯು.ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.








