ಬೇಡಬೇಡವೆಂದರೂ ಶೇ.95ರಷ್ಟು ವಾಟ್ಸ್ಆ್ಯಪ್ ಬಳಕೆದಾರರಿಗೆ ನಿಲ್ಲದ ಸ್ಪಾಮ್ ಸಂದೇಶಗಳು

ಹೊಸದಿಲ್ಲಿ,ಅ.12: ಶೇ.95ರಷ್ಟು ವಾಟ್ಸ್ಆ್ಯಪ್ (Whatsapp) ಮತ್ತು ಶೇ.100ರಷ್ಟು ಮೊಬೈಲ್ (Mobile) ಬಳಕೆದಾರರು ಸ್ಪಾಮ್ ಅಥವಾ ಅನಪೇಕ್ಷಿತ (Spam or unsolicited) ಸಂದೇಶಗಳನ್ನು ಸ್ವೀಕರಿಸುತ್ತಿದ್ದಾರೆ. ಈ ಪೈಕಿ ಶೇ.68ರಷ್ಟು ಬಳಕೆದಾರರ ಮೊಬೈಲ್ ಗಳಿಗೆ ಪ್ರತಿದಿನ ನಾಲ್ಕು ಅಥವಾ ಐದು ಪ್ರಚಾರ ಸಂದೇಶಗಳು ಬಂದು ಬೀಳುತ್ತಿವೆ ಎಂದು ಸಮುದಾಯ ಸಾಮಾಜಿಕ ಮಾಧ್ಯಮ ವೇದಿಕೆಯಾಗಿರುವ LocalCircles ನಡೆಸಿರುವ ಸಮೀಕ್ಷೆಯು ತೋರಿಸಿದೆ.
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ದ ಸ್ಪಷ್ಟ ನಿಯಮಗಳ ಹೊರತಾಗಿಯೂ ಸ್ಪಾಮ್‌ಗಳ ಹಾವಳಿ ಹೆಚ್ಚುತ್ತಿದೆ. ಟ್ರಾಯ್ ಮಾರ್ಗಸೂಚಿಗಳಂತೆ ಗ್ರಾಹಕರು ಡಿಎನ್ಡಿ (ಡು ನಾಟ್ ಡಿಸ್ಟರ್ಬ್)DND (Do Not Disturb)ಚಂದಾದಾರರಾಗಿ ನೋಂದಾಯಿಸಿಕೊಂಡಿದ್ದರೆ ಅವರು ಅನಪೇಕ್ಷಿತ ಕರೆಗಳು ಅಥವಾ ಸಂದೇಶಗಳನ್ನು ಸ್ವೀಕರಿಸಬಾರದು. ಡಿಎನ್ಡಿ ಚಂದಾದಾರರು ಬ್ಯಾಂಕುಗಳಿಂದ ಒಟಿಪಿಗಳಿಗಾಗಿ ಮನವಿ ಅಥವಾ ಇಎಂಐಗಳ ಕುರಿತು ವಿಚಾರಣೆಯಂತಹ ವಹಿವಾಟು ಸಂದೇಶಗಳನ್ನು ಸ್ವೀಕರಿಸಬಹುದು. ಶೇ.74ರಷ್ಟು ಬಳಕೆದಾರರಿಗೆ ಈ ಪಟ್ಟಿಯಿಂದಲೂ ಅನಪೇಕ್ಷಿತ ಸಂದೇಶಗಳು ಬರುವುದು ಮುಂದುವರಿದಿದೆ.
LocalCircles ದೇಶಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ 57,000 ಜನರು ಪಾಲ್ಗೊಂಡಿದ್ದು,ಇವರಲ್ಲಿ ಶೇ.60ಕ್ಕೂ ಅಧಿಕ ಪುರುಷರಾಗಿದ್ದರು. ಸರಕಾರ ಅಥವಾ ಇತರ ಯಾವುದೇ ಅಧಿಕೃತ ಮೂಲಗಳಿಂದ ಸಂವಹನದ ಹೊರತಾಗಿ ಅನಪೇಕ್ಷಿತ ಎಸ್ಎಂಎಸ್ಗಳು ನಾಗರಿಕರ ವೈಯಕ್ತಿಕ ಮಾಹಿತಿಗಳ ದುರುಪಯೋಗವಾಗಿದ್ದು,ಅನೇಕ ಜನರು ವಂಚಕರು,ಸ್ಪಾಮರ್ಗಳು ಮತ್ತು ಟೆಲಿಮಾರ್ಕೆಟಿಯರ್ಗಳು ಮಾಡುವ ಕರೆಗಳು ಮತ್ತು ಸಂದೇಶಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಸಮೀಕ್ಷಾ ವರದಿಯು ತಿಳಿಸಿದೆ.
ಟ್ರಾಯ್ ನ ಡಿಎನ್ಡಿ ಸೇವೆಯೊಂದಿಗೆ ನೋಂದಾಯಿತ 9.30 ಕೋ.ಗೂ ಅಧಿಕ ದೂರವಾಣಿ ಸಂಖ್ಯೆಗಳು ಡಾರ್ಕ್ ವೆಬ್ನಲ್ಲಿ ಮಾರಾಟಕ್ಕಿವೆ ಎಂದು ವರದಿಯೊಂದು ಬಹಿರಂಗಗೊಳಿಸಿದೆ.
ವಾಟ್ಸ್ಆ್ಯಪ್ ಮತ್ತು ಎಸ್ಎಂಎಸ್ ಬಳಕೆದಾರರು ಪ್ರಮುಖವಾಗಿ ಹಣಕಾಸು ಸೇವೆಗಳು,ಆರೋಗ್ಯ ರಕ್ಷಣೆ ಸೇವೆಗಳು ಮತ್ತು ರಿಯಲ್ ಎಸ್ಟೇಟ್ ಕಂಪನಿಗಳಿಂದ ಸಂದೇಶಗಳನ್ನು ಸ್ವೀಕರಿಸುತ್ತಿದ್ದಾರೆ.
ಟ್ರಾಯ್ ಕಾರ್ಯ ನಿರ್ವಹಣೆಯ ಕುರಿತು ಬಳಕೆದಾರರಲ್ಲಿ ವ್ಯಾಪಕ ಅತೃಪ್ತಿಯಿದೆ ಎಂದು ಸಮೀಕ್ಷೆಯು ಬೆಟ್ಟು ಮಾಡಿದೆ. ವರದಿ ಮಾಡುವ ಕಾರ್ಯವಿಧಾನವು ಸುಲಭ ಮತ್ತು ತ್ವರಿತವಾಗಿರಬೇಕು ಎಂದು ನಿರೀಕ್ಷಿಸಿರುವ ಅವರು,ಪ್ರಸಕ್ತ ವ್ಯವಸ್ಥೆಯು ಅನುಕೂಲಕರವಾಗಿಲ್ಲ ಎಂದು ಭಾವಿಸಿದ್ದಾರೆ. ವಾಟ್ಸ್ಆ್ಯಪ್ ಟ್ರಾಯ್ ವ್ಯಾಪ್ತಿಯಿಂದ ಹೊರಗಿದ್ದು,ಎಸ್ಎಂಎಸ್ ಆ್ಯಪ್ನಲ್ಲಿಯೇ ‘ರಿಪೋರ್ಟ್ ಸ್ಪಾಮ್’ ಆಯ್ಕೆಯನ್ನು ಸಕ್ರಿಯಗೊಳಿಸಬೇಕು ಎಂದು ಶೇ.77ರಷ್ಟು ಬಳಕೆದಾರರು ಬಯಸಿದ್ದಾರೆ.
ಇದನ್ನೂ ಓದಿ : ಮುರುಘಾ ಶರಣರ ಪವರ್ ಆಫ್ ಅಟಾರ್ನಿಯನ್ನು ಮತ್ತೊಬ್ಬರಿಗೆ ವರ್ಗಾಯಿಸಿ: ಹೈಕೋರ್ಟ್ ಸೂಚನೆ







