ಉಡುಪಿ: ಅಪಘಾತದಲ್ಲಿ ಮಹಿಳೆ ಸಾವಿಗೆ ಕಾರಣನಾದ ಆರೋಪಿಗೆ ಶಿಕ್ಷೆ

ಉಡುಪಿ, ಅ.12: ದುಡುಕುತನ ಹಾಗೂ ಅಜಾಗರೂಕತೆಯಿಂದ ದ್ವಿಚಕ್ರ ವಾಹನ ಚಲಾಯಿಸಿ ಮಹಿಯೊಬ್ಬರ ಸಾವಿಗೆ ಕಾರಣನಾದ ಆರೋಪಿಗೆ ನಗರದ 1ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
2019ರ ಜನವರಿ 26ರಂದು ಬೆಳಗ್ಗೆ 8:30ರ ಸುಮಾರಿಗೆ ಅಲೆವೂರು ಗ್ರಾಮದ ಬೋಜ ಎಂಬಾತ ಬಡಗುಬೆಟ್ಟು ಗ್ರಾಮದ ಕುಕ್ಕಿಕಟ್ಟೆ ಮುಚ್ಲಿಕೋಡು ದೇವಸ್ಥಾನದ ದ್ವಾರದ ಬಳಿ ತನ್ನ ದ್ವಿಚಕ್ರ ವಾಹನವನ್ನು ದುಡುಕುತನ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಜಯಲಕ್ಷ್ಮೀ ಉಮಾನಾಥ ಮಂಜ ಎಂಬ ಮಹಿಳೆಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ರಸ್ತೆಗೆ ಬಿದ್ದು ತಲೆಗೆ ತೀವ್ರ ಸ್ವರೂಪದ ಗಾಯವಾಗಿ ಮೃತಪಟ್ಟಿದ್ದರು. ಉಡುಪಿ ಸಂಚಾರ ಠಾಣೆಯ ವೃತ್ತನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ವಿರುದ್ಧ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 1ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ್‌ಪ್ರಕಾಶ್ ಅವರು ಆರೋಪಿ ಬೋಜ ಎಂಬಾತನಿಗೆ 2 ವರ್ಷ 6 ತಿಂಗಳ ಕಾರಾಗೃಹ ವಾಸದ ಶಿಕ್ಷೆ ಹಾಗೂ 10,000ರೂ. ದಂಡ ವಿಧಿಸಿ, ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಮೋಹಿನಿ ಕೆ ವಾದ ಮಂಡಿಸಿದ್ದರು.





